ಇತಿಹಾಸ ಸಂಶೋಧಕ ಖ್ಯಾತ ನಾಣ್ಯ ಸಂಗ್ರಾಹಕ ಹೆಚ್.ಖಂಡೋಬರಾವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಮೂಲ್ಯಶೋಧದಂತ ಅಪರೂಪದ ವಸ್ತುಸಂಗ್ರಾಹಲಯ ನಿರ್ಮಾಣ ಮಾಡಿ ಅಧ್ಯಯನಕಾರರಿಗೆ ಆಸರೆಯಾಗಿರುವ ಮತ್ತು ನಾಡಿಗೆ ಬೇಕಾದ ಸಾರ್ಥಕ ಕೆಲಸ ಮಾಡಿರುವ ೮೨ ರ ಹರಯದ ಖಂಡೋಬರಾವ್ ಅವರಿಗೆ ಗೌರವಿಸಲು ಅಭಿನಂದನಾ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯಿಂದ ಮಂಗಳವಾರ ಶಿವಮೊಗ್ಗ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವ ಶಿಷ್ಯವರ್ಗವೇ ನೆರೆದಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಸೆ, ದ್ವೇಷ ಬಿಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು. ಮನುಷ್ಯ ಸಾಯುವ ಮೊದಲು ಏನಾದರೂ ಸಾಧನೆ ಮಾಡಲೇಬೇಕು. ಸಾಧನೆ ಹೇಗೆ ಮಾಡಲು ಸಾಧ್ಯ ಎಂದರೆ ಮೊದಲು ಆಸೆ ಮತ್ತು ದ್ವೇಷವನ್ನು ಬಿಡಬೇಕು. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕು ಎಂದರು.
ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣಗಳನ್ನು ಮತ್ತು ನಿರಂತರ ಚಟುವಟಿಕೆಯನ್ನು ಬೆಳೆಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರವನ್ನು ಪಡೆಯಬಹುದಾಗಿದೆ. ನನ್ನೆಲ್ಲಾ ಸಾಧನೆಗೆ ಗೆಳೆಯರ ಜೊತೆಗೆ ನನ್ನ ಪತ್ನಿಯೂ ಮುಖ್ಯ ಎಂದ ಅವರು, ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ಹೋದ ಮೇಲೆ ಅವಳಿಗಾಗಿಯೇ ಈ ಅಮೂಲ್ಯಶೋಧ ನಿರ್ಮಿಸಿದೆ ಎಂದು ಭಾವುಕರಾಗಿ ನುಡಿದರು.
ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಖಂಡೋಬರಾವ್ ಅಂತಹವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ. ಅವರ ವ್ಯಕ್ತಿತ್ವವೇ ಬಹುದೊಡ್ಡದು. ಅವರ ಸಾಧನೆ ಮತ್ತಷ್ಟು ದೊಡ್ಡದು. ಅವರ ಅಮೂಲ್ಯ ಶೋಧದ ನಿರ್ಮಾಣ ಬೆಲೆ ಕಟ್ಟಲು ಆಗುವುದಿಲ್ಲ. ಅವರು ಸಂಗ್ರಹಿಸಿದ ನಾಣ್ಯಗಳು ಪುಸ್ತಕಗಳು, ಹಳೆಯ ಕಾಲದ ಪರಿಕರಗಳು, ಎಲೆಕ್ಟ್ರಿಕ್ ವಸ್ತುಗಳು, ಆಟಿಕೆಗಳು, ಅಡುಗೆ ಮನೆ ವಸ್ತುಗಳು ಹೀಗೆ ಎಲ್ಲವೂ ಕೂಡ ಅಮೂಲ್ಯವಾದವೇ. ಅವರೊಬ್ಬ ಸಂಸ್ಕೃತಿಯ ಸಂತ. ಅಂತಹವರನ್ನು ಸನ್ಮಾನಿಸುವುದು ಮತ್ತು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡುವುದು ಅತ್ಯಂತ ಸಾರ್ಥಕದ ಕ್ಷಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಕಿರಣ್‌ದೇಸಾಯಿ,ಖಂಡೋಬರಾವ್ ಕೇವಲ ಇತಿಹಾಸ ತಜ್ಞರಲ್ಲ, ನಾಣ್ಯ ಸಂಗ್ರಾಹಕರಲ್ಲ, ಕವಿಗಳಲ್ಲ. ಅವರೊಬ್ಬ ಮಾನವೀಯತೆಯುಳ್ಳವರು ಎಂದರು.
ಅಭಿನಂದನಾ ಗ್ರಂಥ ಕುರಿತು ಸಮಿತಿ ಸಂಚಾಲಕ ಎಂ. ಸಕಲೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಖಂಡೋಬರಾವ್ ಅವರನ್ನು ಸ್ನೇಹಿತರು, ನೆಂಟರು, ವಿವಿಧ ಸಂಘ, ಸಂಸ್ಥೆಗಳಿಂದ ಗೌರವಿಸಲಾಯಿತು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನ ಡಾ. ವಿಶ್ವ ಸಂತೋಷಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು. ಎಸ್.ಬಿ. ಅಶೋಕ್ ಕುಮಾರ್ ಸ್ವಾಗತಿಸಿದರು. ರಮೇಶ್ ಬಾಬು ಜಾಧವ್ ನಿರೂಪಿಸಿದರು.
ನಿನ್ನೆ ಎಂಬುದು ಸತ್ತು ಹೋಗಿದೆ. ಇಂದು ಸಾಲ ಮಾಡಿಯಾದರೂ ತುಪ್ಪ ತಿಂದು ಹೋಗಿಬಿಡೋಣ ಎನ್ನುವ ಈ ಕಾಲಘಟ್ಟದಲ್ಲಿ ನಾವು ಏನು ಎಂದು ಮರೆತು ಗೊತ್ತು ಗುರಿ ಇಲ್ಲದೇ ಪಯಣ ಮಾಡುತ್ತಿರುವ ಈ ಸಂದರ್ಭದಲ್ಲಿ ಸಮಾಜಕ್ಕೆ ಆಸ್ತಿ ಎಂದರೆ ಯಾವುದು ಎಂದು ಅರಿವು ಮೂಡಿಸುವ ಖಂಡೋಬರಾವ್ ಅವರ ಕಾರ್ಯ ಅನುಕರಣೀಯ.
-ಡಾ. ವಿಶ್ವ ಸಂತೋಷಭಾರತಿ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನ
ಅನೇಕರು ವಿಭಿನ್ನ ರೀತಿಯಲ್ಲಿ ತಮ್ಮ ಆಸ್ತಿ ಎಂದು ಹೇಳುತ್ತಾರೆ. ಕೆಲವರಿಗೆ ಪುಸ್ತಕವೇ ಆಸ್ತಿ. ಕೆಲವರಿಗೆ ಹಿರಿಯರು ಬಿಟ್ಟು ಹೋದ ಹೊಲ ಗದ್ದೆಗಳೇ ಆಸ್ತಿ ಎನ್ನುತ್ತಾರೆ. ಆದರೆ, ನಿಜವಾದ ಆಸ್ತಿ ಯಾವುದೆಂದರೆ ಹಿಂದಿನವರು ಬದುಕಿದ ಘಟನೆಗಳು, ಅವರು ಬಾಳಿ ಬದುಕಿದ ಸಂದರ್ಭಗಳು, ಹಳೆಯ ವಸ್ತುಗಳು, ಇವೇ ಮುಂದಿನ ಪೀಳಿಗೆಗೆ ಆಸ್ತಿ ಎಂದು ಪರಿಗಣಿಸಿ ಅದನ್ನು ಸಂರಕ್ಷಿಸಿ ಪುರಾತನ ವಸ್ತುಗಳ ಸಂಗ್ರಹವೇ ಮುಂದಿನ ಪೀಳಿಗೆಗೆ ಆಸ್ತಿ ಎಂದು ತೋರಿಸಿಕೊಟ್ಟವರು ಖಂಡೋಬರಾವ್
-ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನ ಕಲ್ಮಠ
ಖಂಡೋಬರಾವ್ ಅವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಮಾಡಿದ್ದಾರೆ. ಅವರಲ್ಲಿನ ವಿನಯತೆ ಅವರ ವಿದ್ವತ್‌ಗೆ ಸಾಕ್ಷಿ. ಕುವೆಂಪು ವಿಶ್ವವಿದ್ಯಾಲಯಕ್ಕೆ ಖಂಡೋಬರಾವ್ ಮಾಡಿರುವ ಅಮೂಲ್ಯಶೋಧ ಒಂದು ಆಕರ ಅಧ್ಯಯನ ಕೇಂದ್ರವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಏಕವ್ಯಕ್ತಿ ಮಾಡಿದ ಈ ಮಹತ್ತರವಾದ ಕೆಲಸಕ್ಕೆ ನಾನು ನಮಿಸುತ್ತೇನೆ
ಪ್ರೊ.ವೀರಭದ್ರಪ್ಪ, ಕುಲಪತಿ ಕುವೆಂಪು ವಿ,.ವಿ