ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ತಳಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಗಂಗಾಪ್ರಸಾದ್ ಅವರು ನಿಗೂಢವಾಗಿ ಸಾವುಕಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಲೇಜಿಗೆ ಹೋಗುವುದಾಗಿ ಹೇಳಿ ಕಾರಿನಲ್ಲಿ ಹೋಗಿದ್ದ ಪತಿ ಮನೆಗೆ ಬಂದಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಗಂಗಾಪ್ರಸಾದ್ ಪತ್ನಿ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ಹೊನ್ನಾಳಿ ತಾಲೂಕು ಸಾಸಿವೆಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡಾದ ಕೆರೆಯಲ್ಲಿ ಪ್ರೊಫೆಸರ್ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಅನಾಥವಾಗಿ ನಿಂತಿದ್ದ ಕಾರು ಹಾಗೂ ಚಪ್ಪಲಿ ,ಮೊಬೈಲ್ ಹಾಗೂ ಗುರುತುಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಕೆರೆದಂಡೆಯ ಸಮೀಪ ಇಟ್ಟಿದ್ದರಿಂದ ಗುರುತು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನವರಾದ ಗಂಗಾಪ್ರಸಾದ್ ಒಳ್ಳೆ ಕೃಷಿ ವಿಜ್ಞಾನಿಯಾಗಿದ್ದರು. ಎರಡು ಹೊಸ ತಳಿಗಳನ್ನು ಸಂಶೋಧನೆ ಮಾಡಿದ್ದ ಅವರು ಇನ್ನೂ ಎರಡು ತಳಿಗಳ ಸಂಶೋಧನೆಗೆ ಸಾಕಷ್ಟು ಕೆಲಸ ಮಾಡಿದ್ದರು ಎನ್ನಲಾಗಿದೆ. ತೀರಾ ಮೃದುಭಾಷಿಯಾಗಿದ್ದ ಮೃತರು ಕಾಲೇಜಿನ ವಿದ್ಯಾರ್ಥಿಗಳಿಗೆ ನೆಚ್ಚಿನ ಗುರುಗಳಾಗಿದ್ದರು. ಯಾರೊಂದಿಗೂ ಗಟ್ಟಿಯಾಗಿ ಮಾತನಾಡದ ಅವರಿಗೆ ಕಾಲೇಜಿನಲ್ಲಿ ಉತ್ತಮ ಹೆಸರಿದ್ದು, ಎಲ್ಲರೂ ಅನೋನ್ಯವಾಗಿದ್ದರು. ಗಂಗಾಪ್ರಸಾದ್ ಸಾವಿನಿಂದ ಕಾಲೇಜು ಹಾಗೂ ವಿದ್ಯಾರ್ಥಿಗಳು ಒಬ್ಬ ಉತ್ತಮ ವಿಜ್ಞಾನಿಯನ್ನುಕಳೆದುಕೊಂಡಂತಾಗಿದೆ.
ಕೌಟುಂಬಿಕ ಸಮಸ್ಯೆ ಇತ್ತಾ ?
ಗಂಗಾಪ್ರಸಾದ್ ಅವರು ಶಿವಮೊಗ್ಗ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು. ಒಬ್ಬ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಮೃದುಭಾಷಿಯಾಗಿದ್ದ ಪ್ರೊಫೆಸರ್ ಹಿಂದೊಮ್ಮೆ ಮನೆಯಿಂದ ಹೀಗೆ ಯಾರಿಗೂ ಹೇಳದಂತೆ ಹೋಗಿದ್ದರು. ಆಗ ಆವರು ಆತ್ಮಹತ್ಯೆಗೆ ಯತ್ನ ಮಾಡಿದ್ದರೆಂದು ಆಪ್ತಮೂಲಗಳು ತಿಳಿಸಿವೆ. ಆ ಸಂದರ್ಭದಲ್ಲಿ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಹುಡಕಿ ಮನವೊಲಿಸಿ ಕರೆತಂದಿದ್ದರೆನ್ನಲಾಗಿದೆ. ಈಗಲೂ ಅದೇ ರೀತಿಯ ಖಿನ್ನತೆಯಿಂದ ಅವರು ಹೋಗಿರಬಹುದೆಂದು ಶಂಕಿಸಲಾಗಿದೆ. ಮೃತದೇಹ ಸಿಕ್ಕಿದ ಕೆರೆಯಲ್ಲಿ ಹೆಚ್ಚು ನೀರು ಇರಲಿಲ್ಲ. ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಅಸಹಜ ಸಾವಿನ ದೂರು ದಾಖಲಿಸಿಕೊಂಡಿದ್ದು, ತನಿಖೆಯಿಂದ ಸತ್ಯ ಹೊರಬರಬೇಕಿದೆ.
previous post