ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಕೂಡಲೇ ಬಿಡುಗಡೆಮಾಡಬೇಕೆಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಅ.30 ರಂದು ಬೃಹತ್ ಧರಣಿ ಸತ್ಯಾಗ್ರಹ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನ ಸಭೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರ ಅವರು, ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ೨೦೧೫ ರಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗದ ಸಮೀಕ್ಷೆ ನಡೆಸಿದೆ. ಆದರೆ ಆಯೋಗದ ಅಧ್ಯಕ್ಷ ಕಾಂತ್‌ರಾಜ್ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಸರಕಾರ ಸ್ವೀಕರಿಸಿಲ್ಲ ಮತ್ತು ಬಿಡುಗಡೆ ಮಾಡಿಲ್ಲ. ಇದು ಹಿಂದುಳಿದ ವರ್ಗದವರಿಗೆ ಮಾಡಿದ ಅನ್ಯಾಯವಾಗಿದೆ. ಕೂಡಲೇ ವರದಿ ಬಿಡುಗಡೆ ಮಾಡಬೇಕೆಂದು ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಈದ್ಗಾ ಮೈದಾನದಲ್ಲಿ ಅ.೩೦ ರಂದು ಬೆಳಗ್ಗೆ 10.30 ಕ್ಕೆ ಧರಣಿ ಆರಂಭವಾಗಲಿದೆ. ಮಾಜಿ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ, ಹಾಲಿ ಹಾಗೂ ಮಾಜಿ ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಇರುವ ಸಂಖ್ಯೆಗನುಗುಣವಾಗಿ ಸರಕಾರ ಸೌಲಭ್ಯ ಸಿಗುತ್ತಿಲ್ಲ. ಅವುಗಳು ನ್ಯಾಯಬದ್ಧವಾಗಿ ಹಂಚಿಕೆಯಾಗಬೇಕೆಂದರೆ ಕರಾರುವಕ್ಕು ಲೆಕ್ಕ ಬೇಕು. ಸಮೀಕ್ಷಾ ವರದಿ ಬಿಡುಗಡೆ ಮಾಡಿದರೆ ಎಲ್ಲವೂ ಗೊತ್ತಾಗಲಿದೆ ಎಂದು ರಾಮಚಂದ್ರಪ್ಪ ಹೇಳಿದರು.
ರಾಜ್ಯಸರಕಾರ ಹಿಂದುಳಿದ ವರ್ಗಗಳ ೧೮ ನಿಗಮ ಮಂಡಳಿಗಳಿಗೆ ೫೦೦ ಕೋಟಿ ರೂ. ಅನುದಾನ ನೀಡಿದ್ದರೆ, ಕೇವಲ ಎರಡೇ ಮುಂದುವರಿದ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ರೂ.ಅನುದಾನ ನೀಡಿದೆ. ಇದು ಅನ್ಯಾಯದ ಪರಮಾವಧಿಯಾಗಿದೆ. ಈ ತಾರತಮ್ಯ ನಿವಾರಿಸಲು ಹಿಂದುಳಿದ ವರ್ಗಗಳು ಒಗ್ಗಟ್ಟು ತೋರಬೇಕಿದೆ. ಈಗ ಮುಂದುವರಿದ ಜಾತಿಗಳು ಪ್ರವರ್ಗ ೨ ಕ್ಕೆ ತಮ್ಮನ್ನು ಸೇರಿಸಿ ಎಂದು ಹೇಳುತ್ತಿದ್ದಾರೆ. ಅವರಿಗೆ ಮೀಸಲಾತಿ ಕೇಳಬೇಡಿ ಎಂದು ನಾವು ಹೇಳುವುದಿಲ್ಲ ಆದರೆ,102 ಜಾತಿಗಳಿರುವ ೨ಎ ವರ್ಗದಲ್ಲಿ ಕೇಳಬೇಡಿ ಎಂದು ಮನವಿ ಮಾಡುತ್ತೇವೆ. ಈ ಎಲ್ಲ ಕಾರಣದಿಂದ ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಸಿದ್ದರಾಮಯ್ಯ ಅವರು ಭಾಗವಹಿಸುವ ಈ ಧರಣಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು ಮಾತನಾಡಿ, ಇದು ನಮ್ಮ ಪಾಲಿನ ಅನ್ನ ಪಡೆಯಲು ಮಾಡುತ್ತಿರುವ ಹೋರಾಟ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷ ಪ್ರತಿನಿಧಿಸುವ ಮುಖಂಡರೂ ಈ ಒಕ್ಕೂಟದಲ್ಲಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗೆ ನಾವು ಹೋರಾಟ ಮಾಡಲೇಬೇಕಿದೆ. ಹಿಂದುಳಿದ ವರ್ಗಗಗಳ ಸ್ವಾಮೀಜಿಗಳು ಈ ಧರಣಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗದ ನಾಯಕರಾದ ಎಣ್ಣೆಗೆರೆ ವೆಂಕಟರಾಮಯ್ಯ, ಎಂ.ಶ್ರೀಕಾಂತ್, ಎನ್.ರಮೇಶ್, ಎನ್.ಪಿ.ಧರ್ಮರಾಜ್, ಎಸ್.ಪಿ.ಶೇಷಾದ್ರಿ, ಶ್ರೀಧರ್ ಆರ್.ಹುಲ್ತಿಕೊಪ್ಪ, ಎಸ್.ಟಿ.ಹಾಲಪ್ಪ, ವಿಶ್ವನಾಥ್‌ಕಾಶಿ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಜಿ.ಡಿ.ಮಂಜುನಾಥ್, ರಂಗನಾಥ್ , ಭಾಸ್ಕರ್ ಮತ್ತಿತರರಿದ್ದರು.