ಹಿಂದುಳಿದವರ್ಗಗಳ ಶಾಶ್ವತ ಆಯೋಗದಿಂದ ನಡೆದಿರುವ ಸಾಮಾಜಿಕ,ಶೈಕ್ಷಣಿಕ ಸರ್ವೆಯ ವರದಿಯಲ್ಲಿ ಎಲ್ಲಾ ಜಾತಿಗಳ ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕನ್ಯಾಯ ಅಡಗಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಕೂಡಲೆ ಸ್ವೀಕರಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯರು, ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರಾದ ಆರ್ ಕೆ ಸಿದ್ದರಾಮಣ್ಣ ಆಗ್ರಹಿಸಿದ್ದಾರೆ.
ಉಪ್ಪಾರ ಸಮುದಾಯ ಭವನದಲ್ಲಿ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
೨೦೧೩ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಜಾತಿಗಳ ಸಾಮಾಜಿಕ ಶೈಕ್ಷಣಿಕ ಸರ್ವೆಗೆ ಬಜೆಟ್ ನಲ್ಲೆ ಪ್ರಸ್ತಾಪಿಸಿದ್ದರು. ಅದರಂತೆ ೨೦೦ ಕೋ ರೂ ಖರ್ಚಿನಲ್ಲಿ ಸಮೀಕ್ಷೆ ನಡೆದಿದೆ. ಇದು ಕೇವಲ ತಲೆ ಎಣಿಸೋ ಕೆಲಸವಾಗಿಲ್ಲ. ಎಲ್ಲಾ ಜಾತಿಗಳಿಗೆ ಸಾಮಾಜಿಕನ್ಯಾಯ ಭರಿಸುವ ಪ್ರಯತ್ನ ಆಗಿತ್ತು. ಸಾಮಾಜಿಕ.ಆರ್ಥಿಕ, ರಾಜಕೀಯ ನ್ಯಾಯವೂ ಇದರಲ್ಲಿ ಅಡಕವಾಗಿದೆ ಎಂದರು.
ಸ್ವಾತಂತ್ರ್ಯಬಂದು ೭೫ ವರ್ಷ ಆಗಿದ್ದರು ಈ ಸಮಾಜದ ಕಟ್ಟಕಡೆಯ ವ್ಯಕ್ತಿ ಶಾಸಕನಾಗಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳು ಕೇವಲ ಅಂದಾಜಿನ ವ್ಯವಹಾರ ಆಗುತ್ತಿದೆ. ಮಿಲ್ಲರ್ ಕಮಿಷನ್ ಹಿಡಿದು ಇಂದಿನವರೆಗೂ ಸರಿಯಾದ ಮಾಹಿತಿ ಇಲ್ಲ. ಆದರೆ ಈಗಾಗಲೆ ನಡೆದಿರುವ ವರದಿಯಲ್ಲಿ ತಂತ್ರಜ್ಞಾನ ಮೂಲಕ ಇವತ್ತು ಜಾತಿವಾರು ಜನಸಂಖ್ಯೆ ಗುರುತಿಸುವ ಕೆಲಸ ಆಗಿದೆ. ವರದಿ ಸಿದ್ದಗೊಂಡು ಮೂರುವರ್ಷ ಆಗೋಗಿದೆ. ಆದರೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶಶೆಟ್ಟಿ ಅವರು ವರದಿಗೆ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಮಾಡಿಲ್ಲ ಎಂದ ಅವರು ಆಯೋಗ ನ್ಯಾಯಾಂಗವಿದ್ದಂತೆ ಅದರಂತೆ ನಡೆದುಕೊಳ್ಳಬೇಕು. ಸದಸ್ಯ ಕಾರ್ಯದರ್ಶಿಯ ಸಹಿ ಹಾಕಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ವರದಿಯನ್ನು ಸ್ವೀಕರಿಸಿ ಅಧ್ಯಯನ ನಡೆಸಲಿ, ಸಾರ್ವಜನಿಕ ಚರ್ಚೆಗೆ ಬಿಡಲಿ ಅಂತಿಮ ತೀರ್ಮಾನ ಜನಾಭಿಪ್ರಾಯದಂತೆ ಕೈಗೊಳ್ಳಲಿ. ಆದು ಬಿಟ್ಟು ವರದಿಯನ್ನೆ ಮೂಲೆಗುಂಪು ಮಾಡುವುದು ಸರಿಯಲ್ಲ ಎಂದರು.
ಜಾತಿಗಳ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಸ್ವೀಕರಿಸಲು ಆಗ್ರಹಿಸಬೇಕಾಗಿದೆ ಇದಕ್ಕಾಗಿ ಇಡೀ ರಾಜ್ಯದಲ್ಲೆ ಹೋರಾಟ ಆಗಬೇಕಾಗಿದೆ. ವಿಷಯ ಸೂಕ್ಷ್ಮ ಗಂಭೀರವಾಗಿದ್ದು ಪಕ್ಷಾತೀತವಾಗಿರಬೇಕು. ಚುನಾವಣೆ ಬಂದಾಗ ಮಾತ್ರ ರಾಜಕೀಯವಿರಲಿ. ನಾವೆಲ್ಲರೂ ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಕೈ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಕರೆ ನೀಡಿದರು.
ಮಠಾಧಿಪತಿಗಳ ಬಗ್ಗೆ ತಮಗೆ ಗೌರವವಿದೆ. ಆದರೆ ಮಠಾಧಿಪತಿಗಳು ವರದಿ ಸ್ವೀಕರಿಸದಂತೆ ಸರ್ಕಾರಕ್ಕೆ ಹೇಳುತ್ತಿರುವುದು ಸರಿಯಲ್ಲ. ಇದು ಅಸಂವಿಧಾನಿಕವಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡ ಎಂ ಶ್ರೀಕಾಂತ್ ಮಾತನಾಡಿ ಅ.೩೦ ರಂದು ನಡೆಯಲಿರುವ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯ ಎಲ್ಲಾ ಹಿಂದುಳಿದ ಜಾತಿಗಳು ಭಾಗವಹಿಸುವ ಮೂಲಕ ಸಾಮಾಜಿಕನ್ಯಾಯ ಹೋರಾಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.
ಮಾಜಿ ಸೂಡಾ ಅಧ್ಯಕ್ಷ ಎನ್.ರಮೇಶ್, ಮುಖಂಡ ಎಲ್ ಸತ್ಯನಾರಾಯಣರಾವ್, ಕಲಗೋಡು ರತ್ನಾಕರ್, ಉಮಾಪತಿ, ಉಪ್ಪಾರ ಸಂಘದ ಅಧ್ಯಕ್ಷ ಸತ್ಯನಾರಾಯಣ, ನವಿಲೆ ಶ್ರೀಧರ್, ಎಸ್.ಪಿ.ಶೇಷಾದ್ರಿ, ಕೆ.ರಂಗನಾಥ್, ಧರ್ಮಪ್ಪ, ಅಶೋಕ್ ಕುಮಾರ್, ಜಿ.ಡಿ ಮಂಜುನಾಥ್, ಕೆ ದೇವೇಂದ್ರಪ್ಪ, ನಾಗರಾಜ ಕಂಕಾರಿ,ಕಾಶಿವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಆಧ್ಯಕ್ಷತೆ ವಹಿಸಿದ್ದರು.