ಶಿವಮೊಗ್ಗ ಮಹಾನಗರ ಪಾಲಿಕೆಯ ಘನತ್ಯಾಜ್ಯ ಘಟಕ ಮತ್ತು ಅದರ ಸಮರ್ಪಕ ನಿರ್ವಹಣೆ ಮಾಡುವಲ್ಲಿ ಪಾಲಿಕೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ. ಖಾಸಗಿ ಕಂಪನಿಯು ಘಟಕ ನಿರ್ವಹಣೆ ಮಾಡುತ್ತದೆಯಾದರೂ ಅದರ ಮೇಲುಸ್ತುವಾರಿ ಮಾಡಬೇಕಾದ ಮಹಾಪಾಲಿಕೆಯ ಆರೋಗ್ಯ ಮತ್ತು ಪರಿಸರ ವಿಭಾಗ ವಿಫಲವಾಗಿದೆ.
ಜಾನುವಾರುಗಳ ಸಾವು
ಘನತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಬದಲು ತುಂಗಾ ಚಾನಲ್ ಪಕ್ಕದ ಖಾಲಿ ಜಾಗದಲ್ಲಿ ವಾಹನ ಚಾಲಕರು ಹಾಕುತಿದ್ದಾರೆ. ಇದು ಮಾಮೂಲಿ ಪ್ರಕ್ರಿಯೆಯಾಗಿದೆ, ಟ್ರಾಕ್ಟರ್‌ಗಳಲ್ಲಿ ಹಳೆ ಕಟ್ಟಡಗಳ ವೇಸ್ಟ್, ಕಲ್ಯಾಣ ಮಂಟಪಗಳ ತ್ಯಾಜ್ಯವನ್ನು ತುಂಗಾ ಮೇಲ್ದಂಡೆ ಚಾನಲ್ ಅಕ್ಕಪಕ್ಕ ಸುರಿಯಲಾಗುತ್ತಿದೆ. ಗೋಪಾಳ ಮುಖ್ಯ ರಸ್ತೆಯ ವಿವೇಕಾನಂದ ಬಡಾವಣೆಯ ಕುಕ್ಕುವಾಡೇಶ್ವರಿ ದೇವಾಲಯ ಸಮೀಪದಲ್ಲಿ ಈ ರೀತಿಯ ತ್ಯಾಜ್ಯ ಸುರಿಯುವ ಮಿನಿಯಾರ್ಡ್ ಮಾಡಿಕೊಳ್ಳಲಾಗಿದೆ. ಅದೇ ರೀತಿ ಅನುಪಿನಕಟ್ಟೆಗೆ ಹೋಗುವ ಮಾರ್ಗದಲ್ಲಿ ಸುರಿದ್ದ ತ್ಯಾಜ್ಯ ತಿಂದ ಐದು ಜಾನುವಾರುಗಳು ಸಾವುಕಂಡಿವೆ. ಅನುಪಿನ ಕಟ್ಟೆ ಗ್ರಾಮದ ಚಿತ್ರಾ ಪ್ರಕಾಶ್, ರತ್ನಮ್ಮ ಬೋರೇಗೌಡ ಸೇರಿದಂತೆ ಹಲವರ ಮನೆಯ ಜಾನುವಾರು ಸಾವು ಕಂಡಿದ್ದು, ಪಾಲಿಕೆ ನಿರ್ಲಕ್ಷ್ಯಕ್ಕೆ ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರ್ವಾಸನೆ
ಪುರದಾಳು ಗ್ರಾಮ ಪಂಚಾಯಿತಿಯ ಹನುಮಂತಾಪುರ ಸಮೀಪವಿರುವ ಘನತ್ಯಾಜ್ಯಘಟಕದಲ್ಲಿ ಸರಿಯಾದ ನಿರ್ವಹಣೆ ಹಾಗೂ ರಾಸಾಯನಿಕ ಸಿಂಪಡಣೆ ಕಾಲಕಾಲಕ್ಕೆ ಆಗುವುದಿಲ್ಲ. ಈ ಕಾರಣದಿಂದ ಪುರದಾಳು ಗ್ರಾಮ ಸೇರಿದಂತೆ ಸುತ್ತಲ ಹಳ್ಳಿಗಳಿಗೆ ದಿನವೂ ದುರ್ವಾಸನೆ ತಪ್ಪಿದ್ದಲ್ಲ. ಗಾಳಿ ಬೀಸಿದ ಕಡೆ ಬರುವ ದುರ್ವಾಸನೆ ಗೋಪಾಳಕ್ಕೂ ಬರುತ್ತದೆ. ಸ್ಥಳೀಯರು ಪ್ರತಿಭಟನೆ ಮಾಡಿದಾಗ ಎಚ್ಚರವಹಿಸುವ ಘಟಕ ಉಸ್ತುವಾರಿ ನೋಡಿಕೊಳ್ಳುವವರು ಮತ್ತೆ ತಾತ್ಸಾರ ತೋರುತ್ತಾರೆ. ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಪರಿಸರ ಅಧಿಕಾರಿಗಳು ಕಾಲಕಾಲಕ್ಕೆ ಸರಿಯಾದ ನಿರ್ವಹಣೆ ಮಾಡದಿರುವುದೇ ಈ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ.
ರಸ್ತೆಯ ದುರಾವಸ್ಥೆ
ಘನತ್ಯಾಜ್ಯಘಟಕಕ್ಕೆ ಹೋಗುವ ಅನುಪಿನಕಟ್ಟೆ ರಸ್ತೆಯನ್ನು ಪಾಲಿಕೆಯಿಂದಲೇ ಅಭಿವೃದ್ಧಿಪಡಿಸಲಾಗಿತ್ತು. ಅತಿಯಾದ ವಾಹನಗಳ ಸಂಚಾರದಿಂದ ಈ ರಸ್ತೆ ಹಾಳಾಗಿದ್ದು, ಹಲವು ಕಡೆ ಮೊಣಕಾಲೆತ್ತರದ ಗುಂಡಿಗಳು ಬಿದ್ದಿವೆ. ಪಾಲಿಕೆಯ ವಾಹನಗಳೇ ಸಂಚರಿಸುವ ರಸ್ತೆಯನ್ನು ತಕ್ಷಣ ದುರಸ್ತಿಮಾಡುವ ಅಗತ್ಯವಿದೆ. ಹಾಳಾದ ರಸ್ತೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೂ ತೊಂದರೆಯಾಗಿದೆ.