ಅರಣ್ಯ ಹಕ್ಕು ಅಧಿನಿಯಮದಡಿ ಇತರೆ ವರ್ಗದ ಅರ್ಜಿದಾರರಿಗೆ ಮೂರು ತಲೆಮಾರಿನ ಅಂದರೆ ೭೫ ವರ್ಷಗಳ ಅವಧಿಯ ದಾಖಲಾತಿಗಳನ್ನು ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ಈ ಬಗ್ಗೆ ಒಂದು ತಲೆಮಾರಿಗೆ ಅಂದರೆ ೨೫ ವರ್ಷಗಳ ಅವಧಿಯ ದಾಖಲಾತಿಗಳನ್ನು ಒದಗಿಸಲು ವಿನಾಯಿತಿಯನ್ನು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸರಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರು ೭೫ ವರ್ಷಗಳ ದಾಖಲೆ ಸಲ್ಲಿಸಬೇಕೆಂಬ ನಿಯಮವಿದೆ. ಇದರಿಂದ ಮಲೆನಾಡಿನಲ್ಲಿ ಹಲವು ಜಲಾಶಯ ನಿರ್ಮಾಣ, ಪುನರ್‌ವಸತಿ ಯೋಜನೆಗಳಿಂದಾಗಿ ಸಾಗುವಳಿದಾರರಿಗೆ ಮೂರು ತಲೆಮಾರಿನ ದಾಖಲಾತಿ ಸಲ್ಲಿಸುವುದು ಕಷ್ಟವಾಗಿತ್ತು. ಈ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ನೀಡಿದರೆ ಇತರೆ ವರ್ಗದ ಅರ್ಜಿದಾರರುಗಳು ಅರಣ್ಯ ಭೂಮಿಯ ಮೇಲಿನ ಹಕ್ಕು ಪಡೆಯಲು ಸಹಕಾರಿಯಾಗುತ್ತದೆ.
ಮೈಸೂರು ಕಾಗದ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಕಾರ್ಮಿಕರು ಅನ್ಯ ನಿಗಮ/ಮಂಡಳಿಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಕಾಗದ ಕಾರ್ಖಾನೆಯ ಕಾರ್ಯ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಅಂತಹ ನೌಕರರನ್ನು ನಿಯೋಜನೆ ಮೇಲೆ ಕಾರ್ಯನಿರ್ವಸುತ್ತಿರುವ ನಿಗಮ/ಮಂಡಳಿಗಳಲ್ಲಿ ವಿಲೀನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಅಗತ್ಯವಿರುವ ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಅನುಮತಿಗಳನ್ನು ನೀಡಲು ಹಾಗೂ ಅಗತ್ಯ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಿಎಂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕಾರ್ಯದರ್ಶಿಯವರಾದ ವಿ. ಪೊನ್ನುರಾಜ್, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, ಅರಣ್ಯ ಇಲಾಖೆಯ ಕಾರ್ಯದರ್ಶಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.