ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಿ.ಜಿ.ಕೃಷ್ಣ ಮೂರ್ತಿಯನ್ನು ಕೇರಳ ಪೊಲೀಸರು ಶರಣಾದ ನಕ್ಸಲರು ನೀಡಿದ್ದ ಸುಳಿವಿನ ಮೇರೆಗೆ ಬಂಧಿಸಿದ್ದಾರೆಂದು ಗೊತ್ತಾಗಿದೆ. ಕೇರಳ ಪೊಲೀಸರು ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ಕಣ್ಣೂರಿನ ತಲಸ್ಸೆರೆ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಾಲಯ ಇಬ್ಬರೂ ಆರೋಪಿಗಳನ್ನು ಡಿಸೆಂಬರ್ ೯ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಕರ್ನಾಟಕದಲ್ಲಿ ಸಾಕೇತ್ ರಾಜನ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಬಳಿಕ ಬಿ.ಜಿ.ಕೃಷ್ಣಮೂರ್ತಿ ಪಶ್ಚಿಮಘಟ್ಟದ ನಕ್ಸಲ್ ಸಂಘಟನೆಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದ. ರಾಜ್ಯದಿಂದ ಕೇರಳಕ್ಕೆ ಹೋದ ಬಳಿಕ ಸಂಘಟನೆಯ ದಕ್ಷಿಣ ಭಾರತ ವಿಭಾಗದಲ್ಲೂ ಪ್ರಮುಖ ಸ್ಥಾನದಲ್ಲಿದ್ದ ಎನ್ನಲಾಗಿದೆ. ಕೇಂದ್ರ ಸಮಿತಿ ಸದಸ್ಯನೂ ಆಗಿದ್ದ ಬಿಜಿಕೆಯನ್ನು ಬಂಧಿಸಬೇಕು ಇಲ್ಲವಾದಲ್ಲಿ ಎನ್‌ಕೌಂಟರ್ ಮಾಡುವ ಚಿಂತನೆ ರಾಜ್ಯ ಪೊಲೀಸರಿಗಿತ್ತು. ಕೇರಳದಲ್ಲಿ ಕಬಿನಿದಳದ ಕಮಾಂಡರ್ ಆಗಿದ್ದ ಸಾವಿತ್ರಿ ಮತ್ತು ಬಿಜಿಕೆ ಬಗ್ಗೆ ಮಾಹಿತಿ ನೀಡಿದ್ದೇ ಶರಣಾದ ನಕ್ಸಲ್ ರಾಘವೇಂದ್ರ ಎಂದು ಹೇಳಲಾಗಿದೆ.
ಕೇರಳದ ನಕ್ಸಲ್ ಸಂಘಟನೆಯಲ್ಲಿ ಮುಖ್ಯವಾಹಿನಿ ಮತ್ತು ಭೂಗತ ನಕ್ಸಲರ ನಡುವಿನ ಸಂಪರ್ಕ ಕೊಂಡಿಯಾಗಿದ್ದ ರಾಘವೇಂದ್ರ ಇತ್ತೀಚೆಗೆ ಅಲ್ಲಿನ ಪೊಲೀಸರಿಗೆ ಶರಣಾಗಿದ್ದ. ಈತ ನೀಡಿದ್ದ ಮಾಹಿತಿ ಆಧರಿಸಿ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಲಿಜೇಶ್ ಎಂಬಾತನನ್ನು ಕೇರಳ ಪೊಲೀಸರು ಬಂದಿಸಿದ್ದರು. ಈ ಇಬ್ಬರ ವಿಚಾರಣೆ ವೇಳೆ ಪಡೆದ ಮಾಹಿತಿ ಆಧರಿಸಿ ಬಿಜಿಕೆಯನ್ನು ಖೆಡ್ಡಾಕ್ಕೆ ಕೆಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬುಧವಾರ ನ್ಯಾಯಾಲಯಕ್ಕೆ ಕರೆತಂದ ಸಂದರ್ಭ ಬಿಜೆಪಿ ನಕ್ಸಲ್ ಚಳವಳಿ ಪರವಾದ ಘೋಷಣೆ ಕೂಗಿದರೆನ್ನಲಾಗಿದೆ. ನ್ಯಾಯಾಧೀಶರು ಬಂಧಿತ ಇಬ್ಬರು ನಕ್ಸಲರಿಗೆ ಕಮ್ಯಾಂಡೊ ಸೆಕ್ಯುರಿಟಿ ನೀಡುವಂತೆಯೂ ಆದೇಶ ನೀಡಿದ್ದಾರೆ.