ಪ್ರೊಫೆಸರ್ ಬಿ. ಕೃಷ್ಣಪ್ಪ ಹೆಸರಿನಲ್ಲಿದ್ದ ರಾಜ್ಯದ ನಾಲ್ಕು ದಲಿತ ಸಂಘರ್ಷ ಸಮಿತಿಗಳು ಈಗ ವಿಲೀನವಾಗಿದ್ದು, ಎಲ್ಲರೂ ಒಟ್ಟಾಗಿ ಸಂಘಟನೆಯನ್ನು ರಾಜ್ಯಾದ್ಯಂತ ಮತ್ತಷ್ಟು ವಿಸ್ತಾರಗೊಳಿಸುವುದಾಗಿ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ ಬಣ) ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಶಿವಮೊಗ್ಗದ ಎಂ. ಗುರುಮೂರ್ತಿ, ರಾಯಚೂರಿನ ಹನುಮಂತಪ್ಪ, ಚಿಕ್ಕಬಳ್ಳಾಪುರದ ಗಂಗಾಧರ್, ಹಾಸನದ ಸೋಮಶೇಖರ್, ಮಂಡ್ಯದ ಅಂದಾನಿ ಮೊದಲಾದ ಪ್ರಮುಖರು ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರಿನಿಂದಲೇ ಪ್ರಚಲಿತದಲ್ಲಿತ್ತು. ಆದರೆ, ಹಲವು ಕಾರಣಗಳಿಂದ ಸಂಘಟನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ತಳೆದು ಬೇರೆ ಬೇರೆಯಾಗಿದ್ದವು. ಈಗ ನ್ಯಾಯಾಲಯ ಕೂಡ ಪ್ರೊ. ಕೃಷ್ಣಪ್ಪ ಬಣಕ್ಕೆ ಆದ್ಯತೆ ನೀಡಿದೆ. ಹಾಗಾಗಿ ಆ ಹೆಸರಿನ ಪ್ರಮುಖ ನಾಲ್ಕು ಸಂಘಟನೆಗಳನ್ನೂ ವಿಲೀನಗೊಳಿಸಲಾಗಿದೆ ಎಂದರು.
ವಿಲೀನಗೊಂಡ ಸಂಘಟನೆಗಳು 2022ರ ಫೆಬ್ರವರಿ 11 ಮತ್ತು 12 ರಂದು ದಾವಣಗೆರೆಯಲ್ಲಿ ರಾಜ್ಯಮಟ್ಟದ ಐಕ್ಯತಾ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಆ ಮೂಲಕ ದಲಿತ ಆಶಯಗಳನ್ನು ಈಡೇರಿಸುವುದು, ಸರ್ಕಾರದ ಸವಲತ್ತುಗಳನ್ನು ಎಲ್ಲರಿಗೂ ತಲುಪುವಂತೆ ಮಾಡುವುದು, ಸಂಘಟನೆಯನ್ನು ಬೆಳೆಸುವುದು, ಸಾಂಸ್ಕೃತಿಕವಾಗಿ ದಲಿತರನ್ನು ಒಗ್ಗೂಡಿಸುವುದು ಮತ್ತು ದಲಿತರ ದನಿಗಳನ್ನೇ ಅಡಗಿಸುವವರ ವಿರುದ್ಧ ಸಿಡಿದೇಳುವುದು, ಮನುವಾದಿಗಳ ಬೆದರಿಯನ್ನು ಕಟ್ಟಿಹಾಕುವ ಕೆಲಸವನ್ನು ಮಾಡಲಾಗುತ್ತದೆ. ನಾಲ್ಕೂ ಸಂಘಟನೆಗಳು ಒಂದಾಗಿರುವುದರಿಂದ ದಲಿತ ಸಂಘಟನೆಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕರಿಯಪ್ಪ, ಶಿವಪ್ಪ, ಏಸು ಸೇರಿದಂತೆ ಹಲವರಿದ್ದರು.
ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆ ಸಮಂಜಸವಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಈ ದೇಶದಲ್ಲಿ ಭಗವದ್ಗೀತೆ ಯಾರಿಗೆ ಒಳ್ಳೆಯದು ಮಾಡಿದೆಯೋ ಗೊತ್ತಿಲ್ಲ, ಆದ್ರೆ ಬಡವರ ಗೀತೆಯಾಗಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆ. ಕೆಲವು ಜಾತಿವಾದಿಗಳು ಹಂಸಲೇಖರ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದೆ. ಈ ದೇಶದಲ್ಲಿ ಮೂರು ಪರ್ಸೆಂಟ್ ಇರುವ ಮನುವಾದಿಗಳು ಹಂಸಲೇಖರು ಕ್ಷಮೆ ಕೇಳೋದಕ್ಕೆ ಸಾಮಾಜಿಕ ಜಾಲತಾಣವನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡರು. ಆದರೆ ೮೫ ಪರ್ಸೆಂಟ್ ಇರುವ ಜನ ಅದನ್ನು ಪ್ರತಿಭಟಿಸುವಲ್ಲಿ ಸೋತಿದ್ದಾರೆ
ಎಂ.ಗುರುಮೂರ್ತಿ, ರಾಜ್ಯ ಸಂಚಾಲಕ