ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಮೂವರು ಶಾಸಕರು, ಒಬ್ಬರು ಸಂಸದರನ್ನು ಹೊಂದಿದ್ದ ಈಡಿಗ ಸಮುದಾಯವನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸಿದ್ದು, ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ಸಮುದಾಯದವರೊಬ್ಬರಿಗೆ ಉಮೇದುವಾರಿಕೆ ಸಿಗಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ಒಂದೂವರೆ ಸಾವಿರ ಈಡಿಗ ಜನಪ್ರತಿನಿಧಿಗಳಿದ್ದು, ಯಾವುದೇ ರಾಜಕೀಯ ಪಕ್ಷ ಈ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಸುಲಭವಾಗಿ ಗೆಲ್ಲುವ ಸಾಧ್ಯತೆಯಿತ್ತು. ಆದರೆ ಸಮುದಾಯದ ನಾಯಕರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಮತ್ತು ಕುಮಾರ ಬಂಗಾರಪ್ಪ ಅವರುಗಳು ತಾವು ಪ್ರತಿನಿಧಿಸುವ ಪಕ್ಷಗಳಲ್ಲಿ ಸಮುದಾಯದ ಪರ ಲಾಬಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಸಮುದಾಯದ ವಲಯದಲ್ಲಿ ಕೇಳಿಬಂದಿವೆ.
ಬಿಜೆಪಿಯಲ್ಲಿ ಕಡೆಗಣನೆ
ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಈಡಿಗ ಸಮುದಾಯ ಆಡಳಿತಾರೂಢ ಬಿಜೆಪಿಯನ್ನು ಬೆಂಬಲಿಸಿದ್ದು, ಸಮುದಾಯದ ಎರಡನೇ ಹಂತದ ಹಲವು ನಾಯಕರಲ್ಲಿ ಯಾರಿಗಾದರೂ ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ನೀಡಬಹುದೆಂಬ ನಿರೀಕ್ಷೆ ಇತ್ತು. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷರಾದ ಡಾ.ತಿಮ್ಮೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರಿಗೆ ಪತ್ರಬರೆದು ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯದವರಿಗೇ ಟಿಕೆಟ್ ನೀಡಬೇಕೆಂಬ ಮನವಿಯನ್ನೂ ಮಾಡಿದ್ದರು. ಆದರೆ ಬಿಜೆಪಿ ನಾಯಕತ್ವ ಈ ಮನವಿಯನ್ನು ಪುರಸ್ಕರಿಸಿಲ್ಲ. ಪಕ್ಷದಲ್ಲಿ ಗುರುತಿಸಿಕೊಂಡಿರುವ ಸತೀಶ್ ಬೇಗುವಳ್ಳಿ, ಉದ್ಯಮಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸುರೇಶ್ ಕೆ ಬಾಳೇಗುಂಡಿ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಸುರೇಶ್ ಸ್ವಾಮಿರಾವ್, ರಾಜಶೇಖರ್ ಗಾಳಿಪುರ, ಮಂಡಗದ್ದೆ ಅಶೋಕಮೂರ್ತಿ ಸೇರಿದಂತೆ ಹಲವು ಯುವ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಕೂಡಾ ಪಕ್ಷ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನವಿದೆ. ಈ ನಡುವೆ ಉದ್ಯಮಿ ಸುರೇಶ್ ಬಾಳೇಗುಂಡಿ ಅವರಿಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಸಮುದಾಯದ ಹಲವು ಮುಖಂಡರು ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ.
ಕಾಂಗ್ರೆಸ್‌ನಲ್ಲೂ ನಿರ್ಲಕ್ಷ್ಯ
ಕಾಂಗ್ರೆಸ್ ಪಕ್ಷದಲ್ಲಿ ಈ ಬಾರಿ ಈಡಿಗರಿಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅದ್ಯಕ್ಷರಾದ ಕಲಗೋಡು ರತ್ನಾಕರ್ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯನ್ನು ಪ್ರತಿನಿಧಿಸಿರುವ ಅನುಭವ ಹೊಂದಿದ್ದಾರೆ. ಅವರಿಗೆ ಎಲ್ಲಾ ಅರ್ಹತೆ ಇದ್ದರೂ ಪಕ್ಷ ಕಡೆಗಣಿಸಿದೆ. ಅದೇ ರೀತಿ ಬಿ.ಪಿ.ರಾಮಚಂದ್ರ ಕೂಡಾ ಅರ್ಹರಾಗಿದ್ದರು. ಸಾಗರ ವಿಧಾನ ಸಭೆ ಕ್ಷೇತ್ರದ ಮೇಲೆ ಬೇಳೂರು ಗೋಪಾಲಕೃಷ್ಣ, ಡಾ.ರಾಜನಂದಿನಿ ಕಾಗೋಡು ತಿಮ್ಮಪ್ಪ ಹಾಗೂ ಕಲಗೋಡು ರತ್ನಾಕರ್ ಮೂವರೂ ಕಣ್ಣಿಟ್ಟಿದ್ದು, ಒಬ್ಬರಿಗೆ ಈ ಚುನಾವಣೆಯಲ್ಲಿ ಅವಕಾಶ ನೀಡಿದ್ದರೆ ಗೆಲ್ಲಿಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಪಕ್ಷ ಹಾಗೆ ಮಾಡಿಲ್ಲ ಎಂಬ ವಾದ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಜೆಡಿಎಸ್ ಗಾಳ ಹಾಕಲಿದೆಯೇ ?
ಜೆಡಿಎಸ್‌ನಿಂದ ಈವರೆಗೂ ಅಭ್ಯರ್ಥಿ ಘೋಷಣೆಯಾಗಿಲ್ಲದ ಕಾರಣ ಈಡಿಗ ಸಮುದಾಯದ ಯಾವುದಾದರೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದೇ ಎಂಬ ಚಿಂತನೆ ನಡೆದಿದೆ ಎನ್ನಲಾಗಿದೆ. ಹೀಗಾದಲ್ಲಿ ಮೇಲ್ಮನೆ ಚುನಾವಣೆಯಲ್ಲಿ ತ್ರಿಕೋನ ಪೈಪೋಟಿಗೆ ಕಾರಣವಾದರೂ ಅಚ್ಚರಿಯಿಲ್ಲ.