ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಯಡೇಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ದಿಢೀರನೇ ಮಂಗಳವಾರ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಚಾರ್ಯರು, ಅಡುಗೆಯವರು ಮತ್ತು ಶುಶ್ರೂಷಕಿ, ವಾರ್ಡನ್ ಅವರ ವರ್ತನೆ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು ಅವರನ್ನು ಅಮಾನತ್ತು ಮಾಡುವವರೆಗೂ ತಾವು ವಸತಿ ಶಾಲೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದರು.
ಯಡೇಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 242 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಪೈಕಿ 112 ವಿದ್ಯಾರ್ಥಿಗಳು, 125 ವಿದ್ಯಾರ್ಥಿನಿಯರಿದ್ದು, 6 ರಿಂದ 10ನೇ ತರಗತಿವರೆಗೆ ಓದುತ್ತಿದ್ದಾರೆ. ವಸತಿ ಶಾಲೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ದೂರು ಏನು
ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಮುಖವಾಗಿ ಪ್ರಾಚಾರ್ಯ ಚಂದ್ರಪ್ಪ ರಾತ್ರಿ ಕುಡಿದು ಬಂದು ತಮ್ಮನ್ನು ರೂಮಿನಲ್ಲಿ ಕೂಡಿಹಾಕಿ ಥಳಿಸುತ್ತಾರೆ. ಮೈಮೇಲೆ ಬಾಸುಂಡೆ ಬರುವ ರೀತಿಯಲ್ಲಿ ಹೊಡೆಯುತ್ತಿದ್ದಾರೆ. ನಮಗೆ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದರೂ ವಸತಿ ಶಾಲೆಯ ಶುಶ್ರೂಷಕಿ ಗ್ರೇಸಿ ಎಂಬುವವರು ಸರಿಯಾದ ಗಮನ ಕೊಡುತ್ತಿಲ್ಲ. ತಾವೆ ತಂದಿರಿಸಿಕೊಂಡಿರುವ ಔಷಧಿಯನ್ನು ಕೊಟ್ಟು ಒತ್ತಾಯವಾಗಿ ಕುಡಿಯಿರಿ ಎನ್ನುತ್ತಿದ್ದಾರೆ. ತಮ್ಮನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸಹ ಕರೆದೊಯ್ಯುತ್ತಿಲ್ಲ ಎಂದು ದೂರಿದ್ದಾರೆ.
ವಿದ್ಯಾರ್ಥಿಗಳಿಗೆ ಕೊಡುವ ಆಹಾರದಲ್ಲಿ ಹುಳು ಇರುತ್ತದೆ. ನಾವು ವಿರೋಧ ವ್ಯಕ್ತಪಡಿಸಿದರೆ ನಮ್ಮನ್ನು ಟಾರ್ಗೇಟ್ ಮಾಡುತ್ತಾರೆ. ಆಹಾರದಲ್ಲಿ ಹುಳಿ ಉಪ್ಪು ಏನೂ ಇರುವುದಿಲ್ಲ. ಇದನ್ನು ಹೇಳುವ ಸ್ವಾತಂತ್ರ್ಯ ಸಹ ನಮಗೆ ಇಲ್ಲವಾಗಿದೆ. ವಸತಿ ಶಾಲೆಯಲ್ಲಿ ಹೆದರಿಕೊಂಡು ವಿದ್ಯಾಭ್ಯಾಸ ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.
ಶಾಸಕ ಹಾಲಪ್ಪ ಭೇಟಿ
ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಶಾಸಕ ಎಚ್.ಹಾಲಪ್ಪ ಹರತಾಳು ಅಹವಾಲು ಕೇಳಿ, ಪ್ರಾಚಾರ್ಯರನ್ನು ವರ್ಗಾವಣೆಗೊಳಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೆ ಜಿಲ್ಲೆಯಿಂದ ಇಲಾಖೆಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟ ಪ್ರಾಚಾರ್ಯರನ್ನು ಇತರರನ್ನು ತಕ್ಷಣ ಬೇರೆ ಕಡೆ ವರ್ಗಾಯಿಸುವುದೋ ಅಥವಾ ಅಮಾನತ್ತಿನಲ್ಲಿರಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಪ್ರಾಚಾರ್ಯರ ಅಮಾನತ್ತಿಗೆ ಬೇಳೂರು ಒತ್ತಾಯ :
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಿದ್ಯಾರ್ಥಿಗಳ ಜೊತೆ ಮೆರವಣಿಗೆ ನಡೆಸಿ ಯಡೇಹಳ್ಳಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟಿರುವ ಪ್ರಾಚಾರ್ಯರನ್ನು ತಕ್ಷಣ ಅಮಾನತ್ತು ಮಾಡಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ : ಮಾತಿನ ಚಕಮಕಿ
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದು ಪ್ರತಿಭಟನೆ ಹೆಸರಿನಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಬೇಳೂರು ಮತ್ತು ಕಾಂಗ್ರೇಸ್ಸಿಗರ ವರ್ತನೆಯನ್ನು ಸ್ಥಳದಲ್ಲಿದ್ದ ಬಿಜೆಪಿ ಪ್ರಮುಖರು ತೀವೃವಾಗಿ ಖಂಡಿಸಿದರು. ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.
ಪ್ರಾಚಾರ್ಯರ ಅಮಾನತ್ತು : ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ವಿದ್ಯಾರ್ಥಿಗಳು ಮತ್ತು ಪೋಷಕರ ಅಹವಾಲು ಸ್ವೀಕರಿಸಿ, ಪ್ರಾಚಾರ್ಯ ಚಂದ್ರಪ್ಪ ಅವರನ್ನು ಅಮಾನತ್ತು ಮಾಡಿದ್ದಾಗಿ ಘೋಷಣೆ ಮಾಡಿದರು. ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಕೊಡದ ಆರೋಗ್ಯ ನಿರೀಕ್ಷಕಿ, ಅಡುಗೆಯವರ ವಿರುದ್ದ ಸಹ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿ. ಕೆಳದಿ ವಸತಿ ಶಾಲೆಯ ಪ್ರಾಚಾರ್ಯರನ್ನು ತಾತ್ಕಾಲಿಕವಾಗಿ ಪ್ರಾಚಾರ್ಯರನ್ನಾಗಿ ನಿಯೋಜಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಕಮ್ಮಾರ್ ಇನ್ನಿತರರು ಹಾಜರಿದ್ದರು.