ವಿಧಾನ ಪರಿಷತ್ ಚುನಾವಣೆಯ ಮತಪ್ರಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಕ್ರಿಯವಾಗಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ಸಂಚಾರ ಮಾಡಿ ಅಭ್ಯರ್ಥಿ ಡಿ.ಎಸ್.ಅರುಣ್‌ಪರ ಮತಯಾಚನೆ ಮಾಡಿದ್ದಾರೆ. ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳನ್ನೂ ಒಳಗೊಂಡ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಭಾವಳಿ ಜೋರಾಗಿಯೇ ಇದ್ದು, ಪಕ್ಷದ ಅಭ್ಯರ್ಥಿ ಬೆನ್ನಿಗೆ ಅವರು ನಿಂತಿದ್ದಾರೆ.
ಭಾನುವಾರ ಸಾಗರ ಹಾಗೂ ಸೊರಬದಲ್ಲಿ ನಡೆದ ಸಮಾವೇಶಗಳಲ್ಲಿ ಅವರು ಅರುಣ್ ಅವರನ್ನು ಬೆಂಬಲಿಸುವಂತೆ ಕೋರಿದ್ದಾರೆ. ಬಿಜೆಪಿಯ ಸಮಾವೇಶಗಳಲ್ಲಿನ ಜನರನ್ನು ನೋಡಿ ಕಾಂಗ್ರೆಸ್‌ನವರು ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪರ ಕೆಲಸ ಮುಂದಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಸದಸ್ಯರಲ್ಲಿ ಮತಯಾಚನೆ ಮಾಡಬೇಕು. ಗ್ರಾಮ ರಾಜ್ಯವನ್ನು ಸಶಕ್ತಗೊಳಿಸಲು ತಾವು ಅಧಿಕಾರದಲ್ಲಿರುವಾಗ ಎಲ್ಲ ಕೆಲಸ ಮಾಡಲಾಗಿದೆ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಸಾಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಅನೇಕ ಮಹತ್ತರ ಯೋಜನೆಗಳು ಕೈಗೂಡುತ್ತಿವೆ. ಸಿಗಂದೂರು ಸೇತುವೆ. ಜೋಗದ ಅಭಿವೃದ್ಧಿ ,ಹೆದ್ದಾರಿ ಕಾಮಗಾರಿಗಳು ಸಾಗುತ್ತಿವೆ ಎಂದು ಹೇಳಿದರು
ಶಾಸಕ ಹರತಾಳು ಹಾಲಪ್ಪ ಅವರು, ಅರುಣ್ ಯುವಕರಾಗಿದ್ದು, ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿರುವುದಲ್ಲದೆ, ಸಾಮಾಜಿಕ ಕ್ಷೇತ್ರದಲ್ಲಿ ಅವರ ಕುಟುಂಬದ ಸಾಧನೆ ದೊಡ್ಡದಿದೆ. ವಿದ್ಯಾವಂತರಾದ ಅರುಣ್ ಆಯ್ಕೆ ನಮ್ಮೆಲ್ಲರ ಅದ್ಯತೆ ಎಂದು ಹೇಳಿದರು.
ಗೃಹ ಸಚಿವರಾದ ಆರಗ ಜಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮೇಘರಾಜ್. ಹೊಸನಗರ ಮಂಡಲದ ಅಧ್ಯಕ್ಷರಾದ ಗಣಪತಿ ಬೆಳಗೋಡು,
ಲೋಕನಾಥ್ ಬಿಳಿಸಿರಿ ನಗರ ಸಭೆಯ ಅಧ್ಯರಾದ ಮಧುರ ಶಿವಾನಂದ್ ಮತ್ತು ಪಕ್ಷದ ಪ್ರಮುಖ ಮುಖಂಡರು ಮತ್ತಿತರು ಉಪಸ್ಥಿತರಿದ್ದರು.
ಸೊರಬದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಹಾಗೂ ಸಂಸದರನ್ನು ಗೆಲ್ಲಿಸಿರುವ ಜನತೆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದೀರಿ. ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಪಕ್ಷ ಉತ್ತಮ ಆಡಳಿತ ನೀಡಿದೆ. ಜನಪರ ಕೆಲಸಕ್ಕೆ ನಮ್ಮ ಸ್ಥಳೀಯ ಪ್ರತಿನಿಧಿಗಳು ಬೆಂಬಲ ನೀಡಿ ಡಿ.ಎಸ್.ಅರುಣ್ ಅವರನ್ನು ಗೆಲ್ಲಿಸಬೇಕು. ಸೊರಬ ತಾಲೂಕಿನಲ್ಲಿ ನಾವು ಹೆಚ್ಚಿನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.