ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಅರಣ್ಯ ಇಲಾಖೆಯಿಂದ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ರೈತ ಮುಖಂಡ ಪರಶುರಾಮ ಶಿಡ್ಡಿಹಳ್ಳಿ ಆರೋಪಿಸಿದರು.
ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಶಿಡ್ಡಿಹಳ್ಳಿ ಗ್ರಾಮದ ಸರ್ವೆ ನಂ. ೧೧ರ ಸಾಗುವಳಿದಾರರು ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡುವಾಗ ಅರ್ಜಿದಾರರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸರ್ಕಾರಗಳು ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಜತೆಗೆ ಶಿಡ್ಡಿಹಳ್ಳಿ ಗ್ರಾಮದ ಸ.ನಂ 11ರಲ್ಲಿ 71 ಸಾಗುವಳಿದಾರರಿದ್ದು, ಇಲ್ಲಿ 32 ವಾಸದ ಮನೆಗಳಿವೆ. ಸರ್ಕಾರದಿಂದ ಅಂಗನವಾಡಿ ಕೇಂದ್ರ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಮೊದಲ ಬಾರಿ ಅರಣ್ಯ ಇಲಾಖೆಯಿಂದ ನೀಡಿದ ನೋಟೀಸ್‌ಗೆ ಉತ್ತರವಾಗಿ ಅರಣ್ಯ ಸಮಿತಿಯವರು ನಾವು ಅರ್ಜಿ ಸಲ್ಲಿಸಿದಾಗ ನೀಡಿದ ಸ್ವೀಕೃತಿಯನ್ನು ಕೊಟ್ಟಿದ್ದೇವೆ. ಆದರೆ, ನ್ಯಾಯಾಲಯದ ಆದೇಶವನ್ನು ಪಾಲಿಸದೆ ಪದೇ ಪದೇ ನೋಟೀಸ್ ಜಾರಿ ಮಾಡುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದರು.
ಸಾಗುವಳಿದಾರರಿಗೆ ನೀಡಿದ ನೋಟೀಸ್ ವಾಪಸ್ ಪಡೆಯಬೇಕು. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯವರಿಗೆ ಶಿಡ್ಡಿಹಳ್ಳಿಯ 71 ಸಾಗುವಳಿದಾರರಿಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಸಾಗುವಳಿದಾರರ ಮೇಲಿನ ಕೇಸನ್ನು ಕೈ ಬಿಡಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 71 ಸಾಗುವಳಿದಾರರು ಅಹವಾಲು ಸಲ್ಲಿಸಲಿದ್ದೇವೆ. ಈಗಾಗಲೇ ನೋಟೀಸ್ ಜಾರಿ ಮಾಡಿರುವುದು ಸಾಗುವಳಿದಾರರಿಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದರು.
ಶಿಡ್ಡಿಹಳ್ಳಿ ಗ್ರಾಮಸ್ಥರಾದ ಅಬ್ದುಲ್ ಅಜೀಜ್, ಮೈಲಾರಪ್ಪ, ಎನ್.ಎಸ್. ಅರುಣ್, ರಾಮಪ್ಪ, ಎಸ್.ಆರ್. ನಾಗರಾಜ, ದೇವಮ್ಮ, ರೇಣುಕಮ್ಮ, ಎಸ್.ಜಿ. ಲಿಂಗಪ್ಪ, ಗೌರಮ್ಮ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.