ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಗ್ರಾಪಂಗಳಿಗೆ ಅನುದಾನ ಸ್ಥಗಿತಗೊಳಸಿದ್ದಾರೆ. ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ. ಎಂಎಲ್‌ಸಿಗಳಿಗೆ ಎಂಎಲ್‌ಎಗಳಿಗಿಂತ ಕಡಿಮೆ ಅನುದಾನ ಕೊಡುವ ಮೂಲಕ ತಾರತಮ್ಯ ಮಾಡಿದ್ದಾರೆ ಎಂದು ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ವಿಧಾನಪರಿತ್‌ಗೆ ಕಾಂಗ್ರೆಸ್ ಉಮೇದುವಾರರಾಗಿರುವ ಆರ್. ಪ್ರಸನ್ನಕುಮಾರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿದ ಅವರು, ಈ ಬಾರಿ ತನ್ನ ಗೆಲುವು ನಿಶ್ಚಿತ. ಈಗಾಗಲೇ ಎರಡನೆಯ ಸುತ್ತಿನ ಪ್ರಚಾರವನ್ನು ಎರಡು ತಾಲೂಕಿನಲ್ಲಿ ಮುಗಿಸಿದ್ದೇನೆ. ಪ್ರತಿ ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ಮತ ಯಾಚಿಸಿದ್ದೇನೆ. ಹಿಂದಿನ ಬಾರಿಯೂ ತನ್ನೆಲ್ಲಾ ಅನುದಾನವನ್ನು ಗ್ರಾಪಂಗಳ ವಿವಿಧ ಕಾಮಗಾರಿಗಳಿಗೆ ಸದ್ವಿನಿಯೋಗಿಸಿದ್ದೇನೆ. ಆದರೆ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅದಕ್ಕೆ ಅನುದಾನದ ಕೊರತೆ ಇದೆ ಎಂದರು.
ಶಿಕಾರಿಪುರ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಎರಡು ಸುತ್ತು ಪ್ರಚಾರ ಮುಗಿಸಿದೆ. ಜೆಡಿಎಸ್‌ನಿಂದ ಆಯ್ಕೆಯಾದ ಸುಮಾರು ೨೦೦ರಷ್ಟು ಗ್ರಾಪಂ ಸದಸ್ಯರಿದ್ದಾರೆ. ಅವರನ್ನು ಭೇಟಿ ಮಾಡಿದ್ದೇನೆ. ಜೊತೆಗೆ ಗ್ರಾಮಾಂತರ ಮಾಜಿ ಶಾಸಕಿ ಶಾರದ್ದಾ ಪೂರ್‍ಯಾ ನಾಯ್ಕ್, ಭದ್ರಾವತಿಯ ಮಾಜಿ ಶಾಸಕಿ ಅಪ್ಪಾಜಿ ಗೌಡರ ಪತ್ನಿ ಶಾರದಾ, ಅವರನ್ನು ಜೊತೆ ಚರ್ಚಿಸಿ ಜೆಡಿಎಸ್ ಮತ ಕೊಡಿಸುವಂತೆ ಮನವಿ ಮಾಡಿದ್ದೇನೆ ಎಂದರು.
ಸೊರಬ ಮತ್ತು ತೀರ್ಥಹಳ್ಳಿಯಲ್ಲಿ ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ ಮತ್ತು ಆರ್. ಮಂಜುನಾಥ ಗೌಡ ಅವರು ಪ್ರತಿ ಗ್ರಾಪಂಗೆ ಭೇಟಿ ಕೊಟ್ಟು ಮತ ಯಾಚಿಸಿದ್ದಾರೆ. ಇದರಿಂದ ಪ್ರತಿ ಮತದಾರರನ್ನು ತಲುಪಲು ಸಾಧ್ಯವಾಗಿದೆ. ಎಲ್ಲ ಕಡೆ ಹೆಚ್ಚಿನ ಮತ ಬರುವ ವಿಶ್ವಾಸವಿದೆ ಎಂದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ೫ ವರ್ಷದಲ್ಲಿ ೧೦ ಲಕ್ಷ ಮನೆಗಳನ್ನು ವಿತರಿಸಲಾಗಿತ್ತು. ಈಗ ಬಿಜೆಪಿ ಮನೆ, ಅನುದಾನ ಯಾವುದನ್ನೂ ಕೊಡದೆ ಸ್ಥಳೀಯ ಸಂಸ್ಥೆಗಳಿಗೆ ಮಾರಕವಾಗಿ ಕೆಲಸ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ಹೆಚ್.ಸಿ.ಯೋಗೀಶ್, ಎಸ್.ಪಿ.ದಿನೇಶ್, ಇಕ್ಕೇರಿ ರಮೇಶ್, ವಿಜಯ್ ಕುಮಾರ್, ಯು.ಶಿವಾನಂದ, ದೇವಿಕುಮಾರ್ ಉಪಸ್ಥಿತರಿದ್ದರು.
ನಗರಕ್ಕೆ ಸಿದ್ದು ಡಿಕೆಶಿ
ಡಿ. 3ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಗರಕ್ಕಾಗಮಿಸಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಸರ್ಜಿ ಕಲ್ಯಾಣಮಂಟಪದಲ್ಲಿ ಈ ಸಮಾವೇಶ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೈಯುವುದೇ ಸಚಿವ ಈಶ್ವರಪ್ಪನವರ ಕೆಲಸವಾಗಿದೆ. ಇತ್ತೀಚೆಗೆ ಅವರು ನಾಲಿಗೆಯನ್ನು ಹರಿ ಬಿಡುತ್ತಿದ್ದು, ಇದು ಮುಂದುವರೆದರೆ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಮಾಡಬೇಕಾಗುತ್ತದೆ.
ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ