Malenadu Mitra
ರಾಜ್ಯ ಸಾಗರ

ಮರದ ದಿಮ್ಮಿಉರುಳಿ ಮಗಳು ಸಾವು: ಮುಗಿಲು ಮುಟ್ಟಿದ್ದ ಬಡ ದಂಪತಿಯ ರೋದನೆ

ತುತ್ತಿನ ಚೀಲ ತುಂಬಿಕೊಳ್ಳಲು ದೂರದ ಕಲಘಟಗಿಯಿಂದ ಬಂದಿದ್ದ ಆ ಬಡ ದಂಪತಿಗೆ ತಾವೇ ರಾಶಿ ಹೊಡೆದಿದ್ದ ಮರದ ದಿಮ್ಮಿಗಳು ತಮ್ಮದೇ ಕರುಳಕುಡಿಯನ್ನು ಬಲಿ ಪಡೆಯುತ್ತವೆ ಎಂದು ಗೊತ್ತಿರಲಿಲ್ಲ. ಆರು ವರ್ಷದ ಮಗಳು ವರ್ಷಿಣಿ(6)ಯನ್ನು ಕಳೆದುಕೊಂಡ ರವಿ ಮತ್ತು ಮಂಜುಳಾ ಅವರ ರೋದನೆ ನೆರೆದವರ ಕಣ್ಣಾಲಿಗಳು ತೇವವಾಗುವಂತೆ ಮಾಡಿದ್ದವು.
ಒಂದು ಗಂಟೆಯ ಹಿಂದೆ ಆಡುತಿದ್ದ ಮಗಳು ಈಗ ಶವವಾಗಿರುವ ದೃಶ್ಯ ಹೆತ್ತವರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿತ್ತು. ಇದು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಕಂಡು ಬಂದ ಹೃದಯ ವಿದ್ರಾವಕ ದೃಶ್ಯ. ಸಾಗರ ಸಮೀಪದ ಹುಲಿದೇವರಬನ ಸಮೀಪದ ಅರಣ್ಯ ನೆಡುತೋಪಿನಲ್ಲಿ ಮರ ಕಡಿತಲೆ ನಡೆಯುತಿತ್ತು. ರವಿ ಮತ್ತು ಮಂಜುಳ ದಂಪತಿ ಕಡಿದ ಮರಗಳ ಸಿಪ್ಪೆ ಸುಲಿದು. ಮರಗಳ ರಾಶಿ ಹಾಕಿದ್ದರು. ರಾಶಿಯ ಎರಡೂ ಕಡೆ ಗೂಟು ನೆಟ್ಟಿದ್ದರು. ಆದರೆ ಅದೇನಾಯಿತೊ ಗೊತ್ತಿಲ್ಲ ದಿಮ್ಮಿಗಳ ರಾಶಿ ಏಕಾಏಕಿ ಜರಿದಿದೆ. ರಾಶಿ ಪಕ್ಕದಲ್ಲೇ ಆಡುತ್ತಿದ್ದ ಮಗಳು ವರ್ಷಿಣಿಯ ಮೇಲೆ ಮರದ ಗಳಗಳು ಉರುಳಿವೆ. ತೀವ್ರ ಗಾಯಗೊಂಡ ಮಗಳನ್ನು ಸಾಗರ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಆಕೆ ಕೊನೆಯುಸಿರೆಳೆದಿದ್ದಳು. ಬುಧವಾರ ಸಂಜೆ ಸುಮಾರು 4.30ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂರು ತಿಂಗಳ ಹಿಂದೆ ಈ ಎಂಪಿಎಂ ಅರಣ್ಯ ಪ್ರದೇಶದ ಮರ ಕಡಿತಲೆಗೆ ಗುತ್ತಿಗೆ ಪಡೆದಿದ್ದ ಸಿದ್ದವೀರಪ್ಪ 35 ಜನರನ್ನು ಕೆಲಸಕ್ಕೆ ಕರೆಸಿಕೊಂಡಿದ್ದರು. ಈ ತಂಡದಲ್ಲಿ ರವಿ ಮತ್ತು ಮಂಜುಳಾ ದಂಪತಿ ಕೆಲಸಕ್ಕೆ ಒಂದು ಗಂಡು ಒಂದು ಹೆಣ್ಣು ಮಗುವಿನೊಂದಿಗೆ ಕೆಲಸಕ್ಕೆ ಬಂದಿದ್ದರು. ಒಟ್ಟು ಮೂರು ಜನ ಮಕ್ಕಳಿರುವ ರವಿ ದಂಪತಿ ಒಬ್ಬ ಮಗ ಕಲಘಟಗಿಯಲ್ಲಿ ಶಾಲೆಗೆ ಹೋಗುತ್ತಿದ್ದಾನೆ. ಇನ್ನೊಬ್ಬ ಮಗ ಮತ್ತು ವರ್ಷಿಣಿಯೊಂದಿಗೆ ಅರಣ್ಯದಲ್ಲಿಯೇ ಟೆಂಟ್ ಹಾಕಿಕೊಂಡು ದಂಪತಿ ಕೆಲಸ ಮಾಡುತ್ತಿದ್ದರು.

Ad Widget

Related posts

ತಾಳಗುಪ್ಪದಲ್ಲಿ ಅಪಘಾತ ಸೈಕಲ್ ಸವಾರ ಸಾವು

Malenadu Mirror Desk

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

Malenadu Mirror Desk

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ : ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.