ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೂವರು ಮುಖ್ಯಮಂತ್ರಿಯಾಗುತ್ತಾರೆ.ಬಿಜೆಪಿ ಸರ್ಕಾರದ ಅಜೆಂಡಾವೇ ಮೂವರು ಸಿಎಂ ಆಗುವುದು ಎಂದು ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಸಿಎಂ ಅಗಿದ್ದರು.ಈ ಬಾರಿ ಯಡಿಯೂರಪ್ಪ ಸಿಎಂ ಆಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮುರುಗೇಶ ನಿರಾಣಿ ಸಿಎಂ ಆಗುತ್ತಾರಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ.ಹೀಗಾಗಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ ಎಂದರು.
ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು ೪೦ ಪರ್ಸೆಂಟ್ ಕಮಿಷನ್ ಏಜೆಂಟ್ ಆಗಿ ಬಂದಿರುವುದು. ಈ ಬಜೆಟ್ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ. ಹೀಗಾಗಿ ಎಲ್ಲರೂ ಲೂಟಿಗೆ ಇಳಿದಿದ್ದಾರೆ.ಇಂಥ ಭ್ರಷ್ಟ ಹಾಗೂ ಸತ್ತು ಹೋಗಿರುವ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದಲ್ಲಿ ಇಲ್ಲ ಎನ್ನುತ್ತಿದ್ದಾರೆ.ಆದರೆ ಮುಂದೆ ಬಿಜೆಪಿ ಇರುತ್ತದೆಯೋ ಎಂಬುದನ್ನು ನೋಡಿಕೊಳ್ಳಲಿ.ಕಾಂಗ್ರೆಸ್ ಸದೃಢವಾಗಿದೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.ಆದರೆ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ೧೪೦ ಸ್ಥಾನದಲ್ಲಿ ಗೆಲ್ಲುತ್ತೇವೆ ಎನ್ನುತ್ತಾರೆ.ಆದರೆ ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿದ್ದಾರೆ. ಇನ್ನೆಲ್ಲಿ ಗೆಲ್ಲುವುದು ಎಂದು ಲೇವಡಿ ಮಾಡಿದರು.
ಸರ್ಕಾರ ಸತ್ತು ಹೋಗಿದೆ
ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲ ಸತ್ತಿದೆಯೋ ತಿಳಿಯುತ್ತಿಲ್ಲ.ಅತಿ ವೃಷ್ಟಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ರೈತರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಆದರೆ ಬಿಜೆಪಿ ಸಚಿವರು ಹಾಗೂ ಶಾಸಕರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರೈತರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಅಡಿಕೆ, ಭತ್ತ, ಜೋಳ, ರಾಗಿ ಎಲ್ಲವೂ ಮಳೆಯಿಂದ ನಾಶವಾಗಿವೆ. ಆದರೂ, ಶಾಸಕರಾಗಲೀ, ಸಂಸದರಾಗಲೀ, ಅಧಿಕಾರಿಗಳಾಗಲೀ ಚೆಕಾರ ಎತ್ತುತ್ತಿಲ್ಲ. ರೈತರ ಶಾಪ ಇವರನ್ನು ತಟ್ಟದೇ ಬಿಡದು ಎಂದರು