Malenadu Mitra
ರಾಜ್ಯ ಶಿವಮೊಗ್ಗ

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

ಶಿವಮೊಗ್ಗ ಮಂಡ್ಲಿಯಲ್ಲಿರುವ ಸರ್ವೇ ನಂ. 257 ರ 1.19 ಎಕರೆ ಜಾಗದಲ್ಲಿ ಇತಿಹಾಸ ಕಾಲದಿಂದಲೂ ಮುಸ್ಲಿಂ ಪೂರ್ವಜರ ಸಮಾಧಿಗಳಿದ್ದು, ಅದನ್ನು ಖಬರಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಜಾಮೀಯಾ ಮಸೀದಿ ಸವಾಯಿ ಪಾಳ್ಯ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪರ ವಕೀಲರಾದ ಹೆಚ್.ಜಿ. ನಯಾಜ್ ಅಹಮ್ಮದ್ ಖಾನ್ ಮಾತನಾಡಿ, ಓಟಿ ರಸ್ತೆ ಮತ್ತು ಎನ್.ಟಿ. ರಸ್ತೆ ಮಧ್ಯೆ ಇರುವ ಸರ್ವೇ ನಂ. 257 ರ 1.19 ಎಕರೆ ಜಾಗ ಖಬರಸ್ಥಾನ ಯಾನೆ ಗುಂಡು ತೋಪು ಎಂದು ದಾಖಲೆಗಳೆಲ್ಲಾ ಹೇಳುತ್ತಿವೆ. ಅಲ್ಲಿ ಮುಸಲ್ಮಾನರ ಸಮಾಧಿಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಮುಸ್ಲಿಮರ ಪದ್ಧತಿಗಳಂತೆ ಗೋರಿಗಳಿರುವುದು ಕೂಡ ಕಂಡು ಬರುತ್ತದೆ. ಅಲ್ಲದೇ, ರಾಜ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಅವರ ಆಳ್ವಿಕೆಯಲ್ಲಿ ಪಾಳೆಗಾರರ ಸಮಾಧಿ ಕೂಡ ಆಗಿರುತ್ತದೆ ಎಂದರು.

ಈ ಜಾಗದಲ್ಲಿ ಯುದ್ಧಕ್ಕೆ ಬೇಕಾಗುವ ಗುಂಡು ತೋಪುಗಳನ್ನು ಶೇಖರಿಸಿದ್ದು ಸದರಿ ಗುಂಡು ತೋಪುಗಳ ರಕ್ಷಣೆ ಮತ್ತು ಉಸ್ತುವಾರಿಗೆ ಟಿಪ್ಪುಸುಲ್ತಾನ್ ಪಾಳೆಗಾರರನ್ನು ನೇಮಕ ಮಾಡಿರುತ್ತಾರೆ. ಪಾಳೆಗಾರರ ನಿಧನದ ನಂತರ ಅದೇ ಜಾಗದಲ್ಲಿ ದಫನ್ ಮಾಡಿರುತ್ತಾರೆ. ಅಂದಿನಿಂದ ಆ ಜಾಗವನ್ನು ಖಬರ್ ಸ್ಥಾನ್ ಎಂದು ಗುರುತಿಸಲಾಗುತ್ತದೆ. ಮಹಾನಗರ ಪಾಲಿಕೆಯ ದಾಖಲೆ ಮತ್ತು ಕಂದಾಯ ಇಲಾಖೆಯ ಪಹಣಿಯ ದಾಖಲೆಯಲ್ಲೂ ಕೂಡ ಅದು ಖಬರಸ್ಥಾನ ಎಂದೇ ನಮೂದಾಗಿದೆ ಎಂದರು.

ಈ ಜಾಗದಲ್ಲಿ ಕೆಳದಿ ಸಾಮ್ರಾಜ್ಯದ ರಾಜರಾದ ಸೋಮಶೇಖರ ನಾಯಕ ಮತ್ತು ಅವರ ಪತ್ನಿಯ ಸಮಾಧಿ ಇರುತ್ತದೆ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಪುರಸಭೆ ದಾಖಲೆಗಳಲ್ಲಾಗಲೀ, ಕಂದಾಯ ಇಲಾಖೆ ದಾಖಲೆಗಳಲ್ಲಾಗಲೀ ಅಥವಾ ಇತಿಹಾಸದಲ್ಲಾಗಲಿ ಪುರಾತತ್ವ ಇಲಾಖೆಗಳಲ್ಲಾಗಲಿ ಯಾವುದೇ ಉಲ್ಲೇಖ ಇರುವುದಿಲ್ಲ ಮತ್ತು ಇದು ಊಹಾಪೋಹಾದಿಂದ ಕೂಡಿರುತ್ತದೆ ಎಂದರು.

ಇಷ್ಟೆಲ್ಲಾ ಗೊತ್ತಿದ್ದರೂ ಕೂಡ ಉಪ ವಿಭಾಗಾಧಿಕಾರಿ ಸದರಿ ದಾಖಲೆಗಳಿಗೆ ಮಾನ್ಯತೆ ಕೊಡದೇ ಕಾನೂನಿಗೆ ವಿರುದ್ಧವಾಗಿ ಸದರಿ ಆದೇಶದ ವಿರುದ್ಧ ಸತ್ರ ನ್ಯಾಯಾಲಯ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿಗಳು ಮೂರು ಬಾರಿ ಜಾಮೀಯಾ ಮಸೀದಿ ಹಾಗೂ ಸವಾಯಿ ಪಾಳ್ಯದ ಕಮಿಟಿಯವರನ್ನು ಕರೆಸಿ ವ್ಯಾಜ್ಯದ ಸ್ಥಳ ಸ್ವಚ್ಛಗೊಳಿಸಿ ಸರ್ವೇ ಮಾಡಲು ಅನುಮತಿ ಕೋರಿರುತ್ತಾರೆ. ಇದಕ್ಕೆ ಜಾಮೀಯಾ ಮಸೀದಿಯವರು ಸ್ವಚ್ಛಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಸರ್ವೇ ಮಾಡಲು ನಮ್ಮ ತಕರಾರು ಇದೆ. ಇದಿನ್ನು ನ್ಯಾಯಾಲಯದಲ್ಲಿದೆ ಎಂದು ಹೇಳಿದೆವು. ಅದರಂತೆ ಅಲ್ಲಿ ಡಿ. 4 ರಂದು ಸ್ವಚ್ಛ ಮಾಡಲಾಯಿತು ಎಂದರು.

ಖಬರಸ್ಥಾನವನ್ನು ಹೀಗೆ ಸ್ವಚ್ಛ ಮಾಡಿದ್ದರಿಂದ ಮತ್ತಷ್ಟು ಪೂರಕವಾದ ಅಂಶಗಳು ನಮಗೆ ಸಿಕ್ಕವು. ಆ ಜಾಗದಲ್ಲಿ ಮುಸಲ್ಮಾನರ ಸಮಾಧಿಗಳು ಕಂಡು ಬಂದವು. ಹಾಗಾಗಿ ಅದು ಖಬರಸ್ಥಾನವೇ ಆಗಿತ್ತು ಸ್ಪಷ್ಟ ದಾಖಲೆ ಸಿಕ್ಕಂತಾಗಿದೆ. ಈ ಎಲ್ಲಾ ಕಾರಣಗಳಿಂದ ಸದರಿ ಜಾಗವು ಖಬರಸ್ಥಾನ ಎಂದು ದಾಖಲೆಗಳು ಸಿಕ್ಕಿರುವುದರಿಂದ ಈ ಜಾಗವನ್ನು ಖಬರಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಮನವಿ ಮಾಡಿದ ಅವರು, ಈಗಾಗಲೇ ಈ ವಿಷಯವು ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಾಮೀಯಾ ಮಸೀದಿಯ ಅಧ್ಯಕ್ಷ ಸೈಯದ್ ಮುಸ್ತಾಫ, ಉಪಾಧ್ಯಕ್ಷ ಮುಕ್ತಿಯಾರ್ ಅಹ್ಮದ್, ಕಾರ್ಯದರ್ಶಿ ಸೈಯದ್ ಮೊಯಿದ್ದೀನ್, ವಕೀಲ ಆರೀಫ್, ಹಫೀಜ್ ವುಲ್ಲಾ ಖಾನ್, ಜಿಲಾನ್ ಖಾನ್, ಮಜರ್ ಜಾವಿದ್ ಮೊದಲಾದವರಿದ್ದರು.

ಮನುಷ್ಯರೆಲ್ಲರೂ ಒಂದೇ. ಕುವೆಂಪು ಹೇಳಿದಂತೆ ನಾವು ವಿಶ್ವ ಮಾನವರಾಗಬೇಕು. ಖಬರಸ್ಥಾನಗಳು ಶಿವಮೊಗ್ಗ ನಗರದಲ್ಲಿ ತುಂಬಾ ಕಡಿಮೆ ಇವೆ. ಮತ್ತು ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಸಮಾಧಿಯಲ್ಲಿ ಹತ್ತಾರು ಸಮಾಧಿ ಮಾಡುವ ಸನ್ನಿವೇಶವಿರುವುದರಿಂದ ನೆಮ್ಮದಿಯಾಗಿ ಸಮಾಧಿ ಮಾಡಿಸಿಕೊಳ್ಳಲಾದರೂ ಈ ಜಾಗವನ್ನು ಖಬರಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ನಾವು ಎಲ್ಲರಲ್ಲಿಯೂ ಮನವಿ ಮಾಡುತ್ತೇವೆ. ಶಾಂತಿಯನ್ನು ಕದಡುವ ಉದ್ದೇಶ ನಮಗಿಲ್ಲ. ನ್ಯಾಯಾಲಯದ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದ್ದು, ಮುಂದಿನ ದಿನಗಳಲ್ಲಿ ನಮ್ಮ ಪರ ತೀರ್ಪು ಬರಲಿದೆ

ಹೆಚ್.ಜಿ. ನಯಾಜ್ ಅಹಮ್ಮದ್ ಖಾನ್

Ad Widget

Related posts

ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯಿಂದ ಕೌಶಲ್ಯ ತರಬೇತಿ ಕೇಂದ್ರ

Malenadu Mirror Desk

ಬಿಎಸ್‌ವೈಗೆ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಶ್ರೀರಕ್ಷೆ

Malenadu Mirror Desk

ಹರ್ಷ ಕೊಲೆ ಆರೋಪಿಗಳ ಹಿನ್ನೆಲೆ ಏನು , ಯಾರ ಪಾತ್ರ ಏನಿತ್ತು ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.