ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ಸೊರಬ ತಾಲೂಕಿನ ಉಳವಿ ಗ್ರಾಮದ ಸರ್ಕಾರಿ ಹಿರಿಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಗುರುವಾರ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಈರಪ್ಪಯ್ಯ ಮಾತನಾಡಿ, ಉಳವಿ ಶಾಲೆಯಲ್ಲಿ ಒಟ್ಟು143 ಮಕ್ಕಳು ಕಲಿಕೆ ಮಾಡುತ್ತಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಈ ಹಿಂದೆ 6 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. 3 ಜನ ಶಿಕ್ಷಕರು ವರ್ಗಾವಣೆ ಹೋಗಿರುವುದರಿಂದ ಕಳೆದ 2 ವರ್ಷದಿಂದ ಕೇವಲ ೩ಜನ ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವರ್ಷಗಳ ಕಾಲ ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಶಿಕ್ಷಕರ ಕೊರತೆ ಎದುರಾಗಿರುವುದನ್ನು ಅರಿತು ಶಾಲಾಭಿವೃದ್ಧಿ ಸಮಿತಿಯು ಸ್ಥಳೀಯ ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ಅವ್ಯವಸ್ಥೆಯನ್ನು ಸರಿಪಡಿಸಿ ಸಮರ್ಪಕ ಶಿಕ್ಷಕರನ್ನು ನೇಮಿಸಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿಕೊಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ 1ತಿಂಗಳ ಹಿಂದೆ ಜಿಲ್ಲಾ ಶಿಕ್ಷಣ ನಿರ್ದೇಶಕರಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ವಿಡಿಯೊ ಕಳುಹಿಸಲಾಗಿತ್ತು. ಈಗ ಶಿಕ್ಷಕರ ಕೊರತೆ ಬಗ್ಗೆ ಕೇಳಿದರೆ ನನ್ನ ಗಮನಕ್ಕೆ ಬಂದಿಲ್ಲ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ ಎಂದು ದೂರಿದರು.
ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರ ಕೊರತೆ ನೀಗಿಸುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಶಾಲೆಗೆ ಬಂದ ಮಕ್ಕಳನ್ನು ಪೋಷಕರು ಮನೆಗೆ ಕರೆದುಕೊಂಡು ಹೋದರು.
ಗ್ರಾಮ ಪಂಚಾಯಿತಿ ಸದಸ್ಯ ತನ್ವೀರ್, ಪೋಷಕರಾದ ಗಾಯಿತ್ರಿ, ನಸ್ರಿನ್, ಪರಮೇಶ್ವರ, ಶಾರದಮ್ಮ, ಲೋಕೇಶ್, ದಾನಪ್ಪ, ಹಾಲೇಶ, ಸಂತೋಷ, ಅಕ್ಬರ್, ಈರಪ್ಪ, ಪರಶುರಾಮ, ಹೇಮಾ. ನೂರಲ್ಲಾ, ಶಫಿ ಅಹಮದ್, ಜಾಬಿರ್, ರುದ್ರೇಶ, ಬಸವರಾಜ, , ರೇಷ್ಮಾ, ಜಾಕೀರ್ ಇದ್ದರು.