ಭಗವದ್ಗೀತೆ ಶ್ಲೋಕಗಳ ಪಠಣದಿಂದ ಮನಸ್ಸಿನ ಶೋಕ (ದುಃಖಗಳು) ನಿವಾರಣೆಯಾಗಿ ಜೀವನದಲ್ಲಿ ನವ ಚೈತನ್ಯ ಮೂಡುತ್ತದೆ ಎಂದು ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್ ಹೇಳಿದರು.
ವಿನೋಬನಗರದಲ್ಲಿನ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದ ೧೬ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜೀವನದಲ್ಲಿ ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ಉತ್ಸಾಹ ಅಗತ್ಯ. ಆಧುನಿಕ ಯುಗದ ಒತ್ತಡದ ಜೀವನಶೈಲಿಯಿಂದಾಗಿ ಮನುಷ್ಯನಲ್ಲಿ ನಗು ಎಂಬುದು ಮರೆಯಾಗಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಉತ್ತಮಚಿಂತನೆ, ಯೋಗ, ಧ್ಯಾನ, ಭಜನೆಯಿಂದ ಮಾನಸಿಕ ಶಾಂತಿ ದೊರೆಯುವುದಲ್ಲದೆ, ಜೀವನದಲ್ಲಿ ನವ ಉತ್ಸಾಹ ಮೂಡುತ್ತದೆ ಎಂದರು.
ಸ್ವಾರ್ಥ ಮತ್ತು ಅಹಂಕಾರದಿಂದಾಗಿ ಮನುಷ್ಯನಲ್ಲಿ ಪಾಪ, ಪುಣ್ಯ, ದಾನ, ಧರ್ಮದ ಚಿಂತನೆ ಮರೆಯಾಗಿದೆ. ಸರಳ
ಜೀವನ, ತ್ಯಾಗ, ಸಮಾಜಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ಜೀವನ ಸಾರ್ಥಕವಾಗುತ್ತದೆ. ಇಂತಹ ಗುಣಗಳನ್ನು ಯುವಕರಲ್ಲಿ ಜಾಗೃತಗೊಳಿಸುವ ಮೂಲಕ ಸದೃಢ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಭಗವದ್ಗೀತೆ ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿ, ಸ್ಥಿರ ಬುದ್ಧಿಯಿಂದ ದೇವರ ನಾಮಸ್ಮರಣೆ, ಪೂಜೆ ಮಾಡಬೇಕು. ಸಜ್ಜನರಿಗೆ ಹೆಚ್ಚು ಕಷ್ಟಗಳು ಬಂದರೂ ಅದನ್ನು ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಂಡಾಗ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕರುಣಾನಂದಜೀ ಮಹಾರಾಜ್, ಶಿವಮೊಗ್ಗ ಡಯಾಗ್ನಸ್ಟಿಕ್ ಸೆಂಟರ್ನ ಫೆಥಾಲಜಿಸ್ಟ್ ಡಾ. ಕೌಸ್ತುಭ ಅರುಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ಶೋಭಾ ವೆಂಕಟರಮಣ ಅವರನ್ನು ಸನ್ಮಾನಿಸಲಾಯಿತು.
previous post