Malenadu Mitra
ರಾಜ್ಯ ಶಿವಮೊಗ್ಗ

ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆ ವಾಪಸ್ ತೆಗೆದುಕೊಳ್ಳಬೇಕು:ಕೋಡಿಹಳ್ಳಿ

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿರುವುದು ಸ್ವಾಗತದ ವಿಷಯವಾಗಿದೆ  ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
 ರಾಜ್ಯ ರೈತ ಸಂಘ ರೋಟರಿ ರಕ್ತನಿಧಿ ಕೇಂದ್ರದ ಸಭಾಂಗಣಲ್ಲಿ ಆಯೋಜಿಸಿದ್ದ ರೈತ ನಾಯಕ ಎನ್.ಡಿ. ಸುಂದರೇಶ್ ಅವರ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಕೂಡ ಎಪಿಎಂಸಿ ಕಾಯ್ದೆ ಸೇರಿದಂತೆ ಕೆಲವು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಅವರು ವಾಪಸ್ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಸರ್ಕಾರದ ನಡೆಯನ್ನು ಗಮನದಲ್ಲಿಟ್ಟುಕೊಂಡು ನಂತರ ರೈತ ಸಂಘ ತನ್ನ ನಿರ್ಧಾರ ಕೈಗೊಳ್ಳಲಿದೆ ಎಂದರು.
 
ರೈತರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ರೈತರಿಗೆ ನೀಡಬೇಕಾದ ಎಲ್ಲಾ ರೀತಿಯ ಪರಿಹಾರಗಳು ಸಮಯಕ್ಕೆ ಸರಿಯಾಗಿ ಸಿಕ್ಕಿಲ್ಲ. ಮತ್ತು ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ನೀಡಬೇಕಾಗಿದೆ. ಬೆಳೆ ವಿಮೆ ರೈತರ ತಲುಪಿಲ್ಲ. ಸರ್ಕಾರ ಈ ಬಗ್ಗೆ ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಬಾವುಟ ಸುಟ್ಟು ಹಾಕಿ ಹಾಗೂ ಪ್ರತಿಮೆಗಳಿಗೆ ಹಾನಿ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು. ಕಿಡಿಗೇಡಿಗಳ ಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ. ಅವರನ್ನೆಲ್ಲಾ ರಾಜ್ಯದಿಂದ ಆಚೆ ನೂಕಬೇಕು ಎಂದರು.
ಗಡಿಭಾಗದಲ್ಲಿ ಓಟಿಗಾಗಿ ಕೆಲವು ರಾಜಕಾರಣಿಗಳು ಮೌನವಾಗಿರುವುದು ಸರಿಯಲ್ಲ. ಇದು ಓಲೈಕೆ ರಾಜಕಾರಣವಾಗುತ್ತದೆ. ಇದಕ್ಕೆಲ್ಲ ಸರ್ಕಾರ ಅವಕಾಶ ಕೊಡಬಾರದು ಎಂದರು.
ಹಿರಿಯ ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಸುಂದರೇಶ್ ಅವರ ೨೯ ನೇ ನೆನಪಿನ ಕಾರ್ಯಕ್ರಮವನ್ನು ರೈತಸಂಘ ರಕ್ತದಾನದ ಮೂಲಕ ಆಚರಿಸುತ್ತಿದೆ. ಇಂದು ಹಲವು ರೈತರು ರಕ್ತದಾನ ಮಾಡಿದ್ದಾರೆ. ಮುಂದಿನ ಬಾರಿ ನೇತ್ರದಾನದ ಮೂಲಕ ಸುಂದರೇಶ್ ಅವರನ್ನು ಸ್ಮರಿಸಲಾಗುವುದು ಎಂದರು.
ಸುಂದರೇಶ್ ಅವರ ವಿಚಾರಧಾರೆಗಳು ಸದಾ ವರ್ತಮಾನದಲ್ಲಿರುತ್ತವೆ. ಅವರು ಆದರ್ಶ ಹೋರಾಟಗಾರರಾಗಿದ್ದರು. ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದರು. ಯಾವ ಅಧಿಕಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಉಗ್ರ ಸ್ವಭಾವದವರಾಗಿದ್ದರೂ ಅವರೊಳಗೆ ಮಾತೃ ಹೃದಯವಿತ್ತು. ಅವರ ಚಿಂತನೆಗಳ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಬಿ.ಎಂ. ಚಿಕ್ಕಸ್ವಾಮಿ, ಡಿ.ಹೆಚ್. ರಾಮಚಂದ್ರಪ್ಪ, ಹಿಟ್ಟೂರು ರಾಜು, ರೋಟರಿ ಬ್ಲಡ್ ಬ್ಯಾಂಕ್ ಅಧ್ಯಕ್ಷ ಅರಕೆರೆ ಮಂಜಪ್ಪ ಮೊದಲಾದವರಿದ್ದರು.

ಸರ್ಕಾರ ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಸರ್ಕಾರದಿಂದ ಸಿಗಬೇಕಾದ ಪರಿಹಾರಗಳು ರೈತರನ್ನು ತಲುಪುತ್ತಿಲ್ಲ. ಈ ಬಗ್ಗೆ ಸರ್ಕಾರದ ನಡೆ ನೋಡಿಕೊಂಡು ರೈತಸಂಘ ತನ್ನ ನಿರ್ಧಾರ ತೆಗೆದುಕೊಳ್ಳುತ್ತದೆ

ಕೋಡಿಹಳ್ಳಿ ಚಂದ್ರಶೇಖರ್

Ad Widget

Related posts

ಮಲೆನಾಡಿನಲ್ಲಿ ಹಿಜಾಬ್- ಕೇಸರಿ ಶಾಲ್ ವಿವಾದ ತಾರಕಕ್ಕೆ ಕಲ್ಲುತೂರಾಟ, ಕಾಲೇಜಿಗೆ ರಜೆ: ನಿಷೇಧಾಜ್ಞೆ ಹೇರಿಕೆ

Malenadu Mirror Desk

ಶಾರದಾ ಅಪ್ಪಾಜಿ ಭದ್ರಾವತಿ ಜೆಡಿಎಸ್ ಅಭ್ಯರ್ಥಿ : ಎಚ್ಡಿಕೆ

Malenadu Mirror Desk

ದೀಪಾವಳಿಯ ವಿಶೇಷ : ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.