ಶಿವಮೊಗ್ಗ ನಗರದ ಶಾರದ ದೇವಿ ಅಂಧರ ಶಾಲೆ ಎದುರಿನ ಸೂಡ ನಿರ್ಮಿತ ಸ್ವಾಮಿ ವಿವೇಕಾನಂದ ಬಡಾವಣೆಯ ಇ ಬ್ಲಾಕ್ನ ಅಡ್ಡ ರಸ್ತೆಗಳಿಗೆ ಹೊಂದಿ ಕೊಂಡಿರುವ ಖಾಸಗಿ ಜಾಗದವರು ಸಹ ಮುಖ್ಯ ರಸ್ತೆಗೆ ಸಾಗುವಂತೆ ನೇರ ರಸ್ತೆ ಬಿಡಲು ಕ್ರಮ ಕೈಗೊಳ್ಳಬೇಕೆಂದು ಸೌಹಾರ್ದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೂಡ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಅಂಧರ ಶಾಲೆ ಎದುರಿನ ಅನುಪಿನಕಟ್ಟೆ ರಸ್ತೆಗೆ ಸ್ವಾಮಿ ವಿವೇಕಾನಂದ ಬಡಾವಣೆಯ 3 ರಿಂದ 4 ರಸ್ತೆಗಳು ಖಾಸಗಿ ಜಾಗದ ಮೂಲಕ ಸೇರುತ್ತಿವೆ. ಆದರೆ ಈಗ ಖಾಸಗಿ ಜಾಗದವರು ತಮ್ಮ ಜಾಗಕ್ಕೆ ಬೇಲಿ ಹಾಕುವ ಮೂಲಕ ಕಚ್ಚಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದ ಬಡಾವಣೆಯ 150 ಕ್ಕೂ ಹೆಚ್ಚು ಮನೆಗಳ ನಿವಾಸಿಗಳಿಗೆ ನೇರ ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರವೇ ನಿರ್ಮಿಸಿರುವ ಲೇಔಟ್ ನ ರಸ್ತೆಗಳು ಮುಖ್ಯ ರಸ್ತೆಗೆ ಸೇರದೆ ಖಾಸಗಿ ಜಾಗದ ಬಳಿ ಕೊನೆಗೊಳ್ಳಲು ಅವಕಾಶ ನೀಡಬಾರದು. ಖಾಸಗಿ ಲೇಔಟ್ ಗಳಿಗೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರವಾದ ಸೂಡ ತನ್ನ ಲೇಔಟ್ನ ಜನರ ಹಿತ ಕಾಪಾಡಬೇಕೆಂದು ಕೋರಲಾಗಿದೆ.
ಖಾಸಗಿ ಜಾಗದಲ್ಲಿ ನಿವೇಶನ ಅಭಿವೃದ್ಧಿ ಪಡಿಸುವಾಗ ಸ್ವಾಮಿವಿವೇಕಾನಂದ ಬಡಾವಣೆ ಇ ಬ್ಲಾಕ್ನ ಎಲ್ಲಾ ಅಡ್ಡ ರಸ್ತೆಗಳು ಅನುಪಿನಕಟ್ಟೆ ( ಅಂಧರ ಶಾಲೆ ರಸ್ತೆ) ರಸ್ತೆಗೆ ಸೇರುವಂತೆ ರಸ್ತೆಗೆ ಜಾಗ ಬಿಡಲು ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಆಯುಕ್ತರಾದ ಕೊಟ್ರೇಶ್, ಖಾಸಗಿ ಜಾಗದವರು ನಿವೇಶನ ಮಾಡುವಾಗ ಕಡ್ಡಾಯವಾಗಿ ಈ ರಸ್ತೆಗಳನ್ನು ಮುಖ್ಯ ರಸ್ತೆಗೆ ಸೇರಿಸಲು ಜಾಗ ಬಿಡಲು ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಎಸ್.ಬಿ. ರಾಮಪ್ಪಗೌಡ, ಸಂಘಟನಾ ಕಾರ್ಯದರ್ಶಿ ವಿ.ಟಿ. ಅರುಣ್, ಸಹ ಕಾರ್ಯದರ್ಶಿ ಹೆಚ್.ಜಿ. ಯೋಗರಾಜ್, ನಿರ್ದೇಶಕರಾದ ನಾಗರಾಜ್ ನೇರಿಗೆ, ಕೇಶವಮೂರ್ತಿ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.