Malenadu Mitra
ರಾಜ್ಯ ಶಿವಮೊಗ್ಗ

ನಿರಂತರ ಜ್ಯೋತಿ ಭ್ರಷ್ಟಾಚಾರ ಸಿಬಿಐ ತನಿಖೆಯಾಗಲಿ: ಮಾಜಿ ಶಾಸಕ ಪ್ರಸನ್ನಕುಮಾರ್ ಆರೋಪ

ಶಿವಮೊಗ್ಗ: ನಿರಂತರ ಜ್ಯೋತಿ ಯೋಜನೆಯಲ್ಲಿ  ೫ ಕೋಟಿ ರೂ. ಇದ್ದ ಅವ್ಯವಹಾರವನ್ನು ೧೨ ಕೋಟಿ ರೂ ಎಂದು ಸಚಿವರು ಹೇಳಿದ್ದಾರೆ.  ಇದು ಸುಮಾರು ೪೦ರಿಂದ ೫೦ ಕೋಟಿಯಷ್ಟು ಅವ್ಯವಹಾರವಾಗಿರುವ ಶಂಕೆ ಇದೆ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕೆಂದು ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಅವರು, ೬೯೩ ಹಳ್ಳಿಗಳಿಗೆ ಲಾಭವಾಗುವ ಯೋಜನೆ ನಿರಂತರ ಜ್ಯೋತಿಯಾಗಿದೆ. ೨೧೦ ಕೋಟಿಯ ಯೋಜನೆಯಲ್ಲಿ ೧೪೦ ಕೋಟಿಗೂ ಹೆಚ್ಚು ಪಾವತಿ ಮಾಡಲಾಗಿದೆ. ೮ ತಿಂಗಳ ಹಿಂದೆ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಿದಾಗ ಕೇವಲ ೫ ಕೋಟಿ ಎಂದು ಹೇಳಲಾಗಿತ್ತು. ಆದರೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಇದು ೧೨ ಕೋಟಿ ಎಂದಿದ್ದಾರೆ. ಇದರಲ್ಲಿ ೮೯ ಸಾವಿರ ಕಂಬಗಳನ್ನು ಅಳವಡಿಸದೆ ಬಿಲ್ ಮಾಡಲಾಗಿದೆ. ಸಂಪೂರ್ಣವಾಗಿ ಇದನ್ನು ಗಮನಿಸಿದಾಗ ಸುಮಾರು ೪೦ರಿಂದ ೫೦ ಕೋಟಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಹೇಳಿದರು.
ಇಂಧನ ಸಚಿವರು ಶಿವಮೊಗ್ಗಕ್ಕೆ  ಬಂದು ಇಬ್ಬರನ್ನು ಅಮಾನತು ಮಾಡಿದ್ದಾರೆ. ಒಬ್ಬ ಜೆಇ ಮತ್ತೊಬ್ಬ ಎಇಇಯನ್ನು ಅಮಾನತುಗೊಳಿಸಿದ್ದಾರೆ. ಹಾಗಾದರೆ ಇಷ್ಟೊಂದು ದೊಡ್ಡ ಅವ್ಯವಹಾರವನ್ನು ಇವರಿಬ್ಬರೇ ಮಾಡಿದ್ದಾರೆಯೇ. ಉಳಿದ ಹಿರಿಯ ಅಧಿಕಾರಿಗಳ ಪಾತ್ರವಿಲ್ಲವೇ? ಅವರಾರೂ ತಪ್ಪಿತಸ್ಥರಲ್ಲವೇ? ವಿಚಾರಣೆ ಮಾಡದೆ ಇಬ್ಬರನ್ನೇ ಏಕೆ ಅಮಾನತು ಮಾಡಿದರೆಂದು ಅವರು ಪ್ರಶ್ನಿಸಿದರು.
ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸ. ದೊಡ್ಡಮಟ್ಟದ ತನಿಖೆ ಆಗಬೇಕು. ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.
ಸ್ಮಾರ್ಟ್ ಸಿಟಿಯ ಬಗ್ಗೆ ಮಾತನಾಡಿದ ಅವರು, ಯುಜಿ ಕೇಬಲ್,  ಹಾಕುವಲ್ಲಿ ಸುಮಾರು ೩೦ರಿಂದ ೭೫ ಕೋಟಿ ರೂ. ಅವ್ಯವಹಾರವಾಗಿದೆ.  ಅಪೂರ್ಣ ಮತ್ತು ಅವೈಜ್ಞಾನಿಕ ಕಾಮಗಾರಿಯಾಗಿದೆ. ಎಲ್ಲಿ ನೋಡಿದರೂ ಜನರು ಸ್ಮಾರ್ಟ್ ಸಿಟಿ ಬಗ್ಗೆಯೇ ಮಾತನಾಡುತ್ತಾರೆ ಎಂದರು.
ನಗರದ ಹೊರವಲಯದ ದೇವಕಾತಿಕೊಪ್ಪದಲ್ಲಿ ಕೈಗಾರಿಕಾ ವಸಾಹತಿಗೆ ಸರಕಾರ ವಿದ್ಯುತ್ ಪೂರೈಸಲು ೧೦ ಕೋಟಿ ರೂ. ನಲ್ಲಿ ಟ್ರಾನ್ಸ್‌ಫಾರ್ಮರ್ ಹಾಕಬಹುದಿತ್ತು. ಇದನ್ನು ಬಿಟ್ಟು ಆಲ್ಕೊಳ ವಿದ್ಯುತ್‌ತ್ ಸ್ಟೇಶನ್‌ನಿಂದ ೧೪೫  ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಎಳೆಯಲಾಗುತ್ತಿದೆ. ಈ ಕಾಮಗಾರಿಯು ಅರ್ಥವೇ ಆಗುತ್ತಿಲ್ಲ. ಇದ್ಯಾವ ರೀತಿಯ ಯೋಜನೆ ಎಂದು ಪ್ರಶ್ನಿಸಿದರು.
ಅನಗತ್ಯವಾಗಿ ಹಣ ಪೋಲು ಮಾಡಲಾಗುತ್ತಿದೆ. ಇದು ಹೊಳೆಯಲ್ಲಿ ಹೋಮ ಮಾಡಿದಂತಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಸ್. ಕೆ. ಮರಿಯಪ್ಪ,  ಶಿವಾನಂದ, ಶ್ಯಾಮಸುಂದರ್, ದೀಪಕ್ ಸಿಂಗ್,  ಎಸ್. ಟಿ. ಹಾಲಪ್ಪ, ಶಿವಣ್ಣ, ಬಾಬು  ಮೊದಲಾದವರಿದ್ದರು.  

Ad Widget

Related posts

ಶಿವಮೊಗ್ಗದಲ್ಲಿ ಡ್ಯಾನ್ಸ್ ಮಾಸ್ಟರ್ ಕೊಲೆ

Malenadu Mirror Desk

ಶಿವಮೊಗ್ಗ ದಸರಾಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಾಲನೆ

Malenadu Mirror Desk

ಕಾಂಗ್ರೆಸ್ ವತಿಯಿಂದ ಹುತಾತ್ಮರ ದಿನಾಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.