ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಸಮಾರಂಭ
ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಇರುವ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ಹೇಳಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಗುಂಡಪ್ಪಶೆಡ್, ಮಲ್ಲೇಶ್ವರನಗರ 1ನೇ ತಿರುವಿನಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಶಿವಮೊಗ್ಗ ಜಿಲ್ಲಾ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ನಿಗಮದಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸಲು ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ನೀಡುವ ಆರ್‍ಟಿಜಿಎಸ್ ನೇರಪಾವತಿ ವ್ಯವಸ್ಥೆ ಮಾಡಲಾಗಿದೆ.225 ವಿಧಾನಸಭಾ ಕ್ಷೇತ್ರಗಳಿಗೂ ನಿಗಮದ ಅನುದಾನ ಹಂಚಿಕೆಯಾಗಿದ್ದು ಮುಂಬರುವ ಅನುದಾನವನ್ನೂ ಮರು ಹಂಚಿಕೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಭೂ ಒಡೆತನ ಯೋಜನೆಯಡಿ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಈ ಭಾಗದಲ್ಲಿ ಕೂಡ ಫಲಾನುಭವಿಗಳು ಮುಂದೆ ಬರಬೇಕು ಎಂದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ೨೦೧೮-೧೯ ನೇ ಸಾಲಿನಲ್ಲಿ ಕೊರೆಸಲಾದ ಬೋರ್‌ವೆಲ್‌ಗಳ ಫಲಾನುಭವಿಗಳಿಗೆ ಪಂಪ್‌ಸೆಟ್ ವಿತರಣೆ ನಿಂತುಹೋಗಿತ್ತು. ಈ ಕೆಲಸಕ್ಕೆ ಚಾಲನೆ ನೀಡುತ್ತಿರುವುದು ಒಳ್ಳೆಯ ಕೆಲಸ. ಆದರೆ ಹಿಂದೆ ಕೊರೆಸಿದ ಬೋರ್‍ನಲ್ಲಿ ನೀರು ಬತ್ತಿದೆಯೋ ಏನೋ ಗೊತ್ತಿಲ್ಲ. ಆದ್ದರಿಂದ ಬೋರ್ ಕೊರೆಸಿದ ವರ್ಷವೇ ಪಂಪ್‌ಸೆಟ್ ನೀಡುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಗಮಗಳಡಿ ಇರುವ ಯೋಜನೆಗಳ ಸೌಲಭ್ಯ ಪಡೆಯಲು ಫಲಾನುಭವಿಗಳಿಂದ ಸಾಕಷ್ಟು ಅರ್ಜಿಗಳು ಬರುತ್ತಿವೆ. ಆದರೆ ಅನುದಾನ ಕಡಿಮೆ ಇದೆ. ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಈ ವರ್ಷ ರೂ73ಕೋಟಿ ಅನುದಾನ ನಿಗದಿಯಾಗಿದ್ದು ಇದು ಸಾಕಾಗುತ್ತಿಲ್ಲ. ಹಿಂದುಳಿದವರಿಗೆ, ದಲಿತರ ಅಭಿವೃದ್ದಿಗೆ ಕೇವಲ ಹೆಚ್ಚಿನ ಅನುದಾನ ಘೋಷಿಸಿದರೆ ಸಾಲದು. ಅದು ಅನುಷ್ಟಾನಕ್ಕೆ ಬರಬೇಕು ಎಂದರು.
ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್, ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ನಿರ್ದೇಶಕರಾದ ದೇವಾನಂದ್, ಬಿಳಕಿ ಕೃಷ್ಣಮೂರ್ತಿ, ಪಾಲಿಕೆ ಸದಸ್ಯರು, ದಲಿತ ಸಮಾಜದ ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪರಮೇಶ್ವರ್, ಇತರರು ಹಾಜರಿದ್ದರು.
ನಿಗಮದ ಯೋಜನೆಯೊಂದರಡಿ 5ಸಾವಿರ ಗುರಿಗೆ 76 ಸಾವಿರ ಅರ್ಜಿಗಳು ಬಂದಿವೆ. ಈ ವರ್ಷ ಒಟ್ಟಾರೆ ೧.೧೯ ಅರ್ಜಿಗಳು ಬಂದಿದ್ದು, ಗುರಿಯ ಸಂಖ್ಯೆಯನ್ನು ಹೆಚ್ಚಿಸುವ ಹಾಗು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ
ಕೆ.ಎಂ.ಸುರೇಶ್‌ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕ