ಪಲ್ಸ್ ಪೋಲಿಯೊ ಅಭಿಯಾನ
ಫೆಬ್ರವರಿ 27ರಿಂದ ನಡೆಯಲಿರುವ ಪಲ್ಸ್ ಪೋಲಿಯೊ ಅಭಿಯಾನದ ಸಂದರ್ಭದಲ್ಲಿ ಅರ್ಹ ಮಕ್ಕಳು ಪ್ರಥಮ ದಿನ ಬೂತ್‍ಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಲು ಉತ್ತೇಜನ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.
ಪಲ್ಸ್ ಪೋಲಿಯೊ ಅಭಿಯಾನ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಖಾಸಗಿ ಶಾಲೆಗಳು ಸೇರಿದಂತೆ ಲಭ್ಯವಿರುವ ದೊಡ್ಡ ಹಾಲ್‍ಗಳನ್ನು ಬಳಸಿಕೊಂಡು ಬೂತ್ ಮಟ್ಟದಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಬೇಕು. ಅಲೆಮಾರಿಗಳು, ಸ್ಲಂ ಪ್ರದೇಶದಲ್ಲಿ ವಾಸಿಸುವವರು, ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವುದನ್ನು ಖಾತ್ರಿಪಡಿಸಬೇಕು ಎಂದು ಅವರು ಸೂಚನೆ ನೀಡಿದರು.
ಪಲ್ಸ್ ಪೋಲಿಯೊ ಅಭಿಯಾನ ಶೇ.100ರಷ್ಟು ಯಶಸ್ವಿಯಾಗಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಮನೆಯ ಸಮೀಪವಿರುವ ಬೂತ್‍ಗಳಿಗೆ ಮೊದಲ ದಿನ ಕರೆ ತಂದು ಲಸಿಕೆ ಹಾಕಿಸಬೇಕು. ಈ ಕುರಿತು ಎಲ್ಲಾ ಮಾಧ್ಯಮಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ಕಾರ್ಯ ನಡೆಸುವಂತೆ ಅವರು ತಿಳಿಸಿದರು.
ಫೆಬ್ರವರಿ 27ರಂದು ಲಸಿಕಾ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 3ದಿನ ಹಾಗೂ ನಗರ ಪ್ರದೇಶಗಳಲ್ಲಿ 4ದಿನಗಳ ಕಾಲ ಮನೆ ಮನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ 1051 ಬೂತ್‍ಗಳಲ್ಲಿ 134149 ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ 89807 ಹಾಗೂ ನಗರ ಪ್ರದೇಶದಲ್ಲಿ 44342 ಅರ್ಹ ಮಕ್ಕಳು ಇದ್ದಾರೆ. ಪಲ್ಸ್ ಪೋಲಿಯೋ ಯಶಸ್ವಿ ಅಭಿಯಾನಕ್ಕಾಗಿ 30ಸಂಚಾರಿ ಹಾಗೂ 38 ಟ್ರಾನ್ಸಿಟ್ ಬೂತ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, 205 ಮೇಲ್ವಿಚಾರಕರನ್ನು, 3090 ವ್ಯಾಕ್ಸಿನೇಟರ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಆರ್‍ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯಕ್ ಅವರು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ನೋಡಲ್ ಅಧಿಕಾರಿ ಡಾ.ಸತೀಶ್ಚಂದ್ರ, ಡಾ.ಕಿರಣ್, ಡಿಡಿಪಿಐ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು