ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಮಕರ ಸಂಕ್ರಾಂತಿ ನಿಮಿತ್ತ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಬುಧವಾರದಿಂದಲೇ ಆರಂಭವಾಗಿದ್ದು, ಗುರುವಾರ ಸಂಜೆ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೋಮಾದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ.ಎಸ್.ರಾಮಪ್ಪ, ಆಡಳಿತ ಮಂಡಳಿ ಕಾರ್ಯದರ್ಶಿ ರವಿಕುಮಾರ್ ಶ್ರೀಗಳನ್ನು ಬರಮಾಡಿಕೊಂಡರು. ಕೋವಿಡ್ ಮಾರ್ಗಸೂಚಿ ಅನ್ವಯ ಭಕ್ತಾದಿಗಳ ಪ್ರವೇಶ ನಿರ್ಬಂಧ ಇದ್ದ ಕಾರಣ ದೇವಾಲಯ ಸಿಬ್ಬಂದಿ ಮತ್ತು ಧರ್ಮದರ್ಶಿಗಳ ಕುಟುಂಬ ವರ್ಗದವರು ಮಾತ್ರ ಪಾಲ್ಗೊಂಡಿದ್ದರು. ಶುಕ್ರವಾರ ಚೌಡಮ್ಮನ ಮೂಲ ಸ್ಥಳ ಸೀಗೆಕಣಿವೆಯಲ್ಲಿ ಸಂಕ್ರಾಂತಿ ಪೂಜಾ ವಿಧಿವಿಧಾನಗಳು ನಡೆಯಲಿವೆ ಆದರೆ ಯಾವುದೇ ಮೆರವಣಿಗೆ ಇರುವುದಿಲ್ಲ. ಸಿಗಂದೂರಿನಲ್ಲಿ ಸ್ಥಳೀಯ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಪೂಜಾ ಸೇವೆ ಇರುವುದಿಲ್ಲ. ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಇರುವ ಕಾರಣ ದೇಗುಲ ಸಂಪೂರ್ಣ ಬಂದ್ ಆಗಿರಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಕೋವಿಡ್ ಮಾರ್ಗಸೂಚಿಯನ್ವಯ ಭಕ್ತಾದಿಗಳಿಗೆ ಅವಕಾಶ ಇರಲಿದೆ.