Malenadu Mitra
ರಾಜ್ಯ ಶಿವಮೊಗ್ಗ

ಉತ್ತಮ ಪರಿಸರ ನೀಡುವ ಮೂಲಕ ಧನ್ಯರಾಗಬೇಕು : ಅನುರಾಧ

ಹವಾಮಾನ ಬದಲಾವಣೆ ಅರಿವು ಕಾರ್ಯಕ್ರಮ

ಯುವಜನತೆ ಸೇರಿದಂತೆ ನಾವೆಲ್ಲ ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿ, ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಇದೇ ನಾವು ಸಮಾಜಕ್ಕೆ ಕೊಡುವ ಅತ್ಯುತ್ತಮ ಕೊಡುಗೆ ಎಂದು  ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧ.ಜಿ ಹೇಳಿದರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಾಗೂ ಎನ್‌ಎಸ್‌ಎಸ್ ಇವರ ಸಹಯೋಗದೊಂದಿಗೆ ಶುಕ್ರವಾರ  ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಹವಾಮಾನ ಬದಲಾವಣೆ ಅರಿವು ನೀಡುವ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಹಿಂದೆ ಹವಾಮಾನ ಬದಲಾವಣೆ ನಿಧಾನಗತಿಯಲ್ಲಿ ಆಗುತ್ತಿತ್ತು. ಅದರರ್ಥ ಪರಿಸರ ಮಾಲಿನ್ಯ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಬಹಳ ವೇಗವಾಗಿ ಹವಾಮಾನ ವೈಪರೀತ್ಯ ಆಗುತ್ತಿದೆ. ತಾಪಮಾನ ಯತೇಚ್ಚವಾಗಿ ಏರುತ್ತಿದೆ. ಇದು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಅಭಿವೃದ್ದಿ ಮತ್ತು ನಗರೀಕರಣದ ಪರಿಣಾಮ. ಯುವಜನರಾದ ನೀವು ಪ್ರಾಕೃತಿಕ ವೈಪರೀತ್ಯಕ್ಕೆ ಕಾರಣಗಳೇನು, ಇದಕ್ಕೆ ಪರಿಹಾರೋಪಾಯಗಳೇನು ಎಂದು ವಿಮರ್ಶಿಸಬೇಕು ಎಂದರು.
  ಬದಲಿ ಇಂಧನ, ಸೋಲಾರ್ ಬಳಕೆ, ಮಳೆಕೊಯ್ಲು ಸೇರಿದಂತೆ ಪರಿಸರ ಸಂರಕ್ಷಣೆಯ ನವನವೀನ ವಿಧಾನಗಳ ಬಗ್ಗೆ ಯುವಜನತೆ ಚಿಂತಿಸಿ, ಪರಿಹಾರ ಮಾರ್ಗಗಳತ್ತ ಕಾರ್ಯೋನ್ಮುಖರಾಗಬೇಕು. ಮನೆ ಸುತ್ತಮುತ್ತ ಸೇರಿದಂತೆ ನಮ್ಮ ಊರು, ನಗರವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ನೀರಿನಲ್ಲಿ, ಮನೆ ಟೆರೇಸ್ ಹೀಗೆ ಎಲ್ಲೆಡೆ ಗಿಡ ಬೆಳೆಸಬಹುದಾಗಿದ್ದು ತಮ್ಮ ಸುತ್ತಮುತ್ತ ಗಿಡ ಮರ ಬೆಳೆಸುವ ಮೂಲಕ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಬೇಕು ಎಂದು ಯುವಜನತೆಗೆ ತಿಳಿ ಹೇಳಿದರು.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈದೇಹಿ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಹಾಗೂ ಸ್ಮಾರ್ಟ್‌ಸಿಟಿ ಲಿ. ಎಜಿಎಂ ರತ್ನಾಕರ್ ಮಾತನಾಡಿದರು.
ಜೆಎನ್‌ಎನ್‌ಸಿಸಿ ವಿಶ್ರಾಂತ ಪ್ರಾಚಾರ್ಯರಾದ ಪ್ರೊ.ಶ್ರೀಪತಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪಿಪಿಟಿ ಪ್ರದರ್ಶನದ ಮೂಲಕ ಹವಾಮಾನ ಬದಲಾವಣೆಯ ಕಾರಣಗಳು, ಇದರ ಪ್ರತಿಕೂಲ ಪರಿಣಾಮ ಮತ್ತು ಪರಿಹಾರೋಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಶುಭಾ ಮರವಂತೆ ನಿರೂಪಿಸಿದರು. ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪರಿಸರ ನಾಗರಾಜ್ ವಂದಿಸಿದರು.

ಪ್ರಸ್ತುತ ನಗರದಲ್ಲಿ ಪರಿಸರ ಸಂರಕ್ಷಣೆ ಕೇಂದ್ರೀಕೃತವಾದ 14 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 10 ಕಾಮಗಾರಿಗಳು ಪೂರ್ಣಗೊಂಡಿವೆ. 2 ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಗೂ ಹಸಿರು ನಗರೀಕರಣ ಯೋಜನೆಯಡಿ ನಗರದಾದ್ಯಂತ 8630 ಮರಗಳನ್ನು ಬೆಳೆಸಲು ಸಸಿಗಳನ್ನು ನೆಡಲಾಗುತ್ತಿದೆ. ಹಾಗೂ ಮೂರು ವರ್ಷಗಳ ಕಾಲ ಇವುಗಳನ್ನು ಸ್ಮಾರ್ಟ್‌ಸಿಟಿ ವತಿಯಿಂದ ನಿರ್ವಹಿಸಲಾಗುವುದು.  ನಗರದ 19 ಕಡೆಗಳಲ್ಲಿ ಪಾರ್ಕ್‌ಗಳ ಅಭಿವೃದ್ದಿ ಮಾಡಲಾಗುತ್ತಿದ್ದು, 12428 ಮರಗಳನ್ನು ಸ್ಮಾರ್ಟ್‌ಸಿಟಿ ವತಿಯಿಂದ ನೋಡಿಕೊಳ್ಳಲಾಗುತ್ತಿದೆ. ಹೀಗೆ ನಗರದ ಹಸಿರೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದಲ್ಲಿ, ನಗರ ಸುಂದರವಾಗುವುದರೊಂದಿಗೆ ಹಸಿರಾಗುತ್ತದೆ.

-ಶರತ್‌ಬಾಬು,ಸ್ಮಾರ್ಟ್‌ಸಿಟಿ ಲಿ. ಕಂಪನಿ ಸೆಕ್ರೆಟರಿ 

 

ಪ್ರಾಕೃತಿಕ ವೈಪರೀತ್ಯದ ಪರಿಣಾಮ ಮನುಕುಲದ ಮೇಲೆ ಹೇಗೆಲ್ಲ ಆಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರೋಪಾಯ ಕುರಿತು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪರಿಸರ ಸಂರಕ್ಷಣೆ ಮಾಡುವುದು ಅತ್ಯಂತ ಜರೂರಾದ ಕೆಲಸವಾಗಿದ್ದು ಸರ್ಕಾರದೊಂದಿಗೆ ಯುವಜನರಾದ ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರೀಕರು ಕೈಜೋಡಿಸಬೇಕು.


– ಬಿ.ವರ್ಗೀಸ್, ಸ್ಮಾರ್ಟ್‌ಸಿಟಿ ಲಿ. ಮುಖ್ಯ ದತ್ತಾಂಶಗಳ ಅಧಿಕಾರಿ

Ad Widget

Related posts

ಸಂಸದರಿಂದ ಶಿಷ್ಟಾಚಾರ ಉಲ್ಲಂಘನೆ : ಆಯನೂರು ಆರೋಪ

Malenadu Mirror Desk

ಮುರುಘಾ ಶರಣರ ಬಂಧನ, ಆರೋಪ ಬಂದ ಆರು ದಿನಗಳ ಬಳಿಕ ಶ್ರೀಗಳ ಸೆರೆ, ಅಜ್ಞಾತ ಸ್ಥಳದಲ್ಲಿ ವಿಚಾರಣೆ, ವೈದ್ಯಕೀಯ ಪರೀಕ್ಷೆ ಸಾಧ್ಯತೆ

Malenadu Mirror Desk

ರಾಜಾಹುಲಿ ನುಡಿದದ್ದೇ ಘರ್ಜನೆ …

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.