Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಮಲೆನಾಡಿನಲ್ಲಿ ಹಿಜಾಬ್- ಕೇಸರಿ ಶಾಲ್ ವಿವಾದ ತಾರಕಕ್ಕೆ ಕಲ್ಲುತೂರಾಟ, ಕಾಲೇಜಿಗೆ ರಜೆ: ನಿಷೇಧಾಜ್ಞೆ ಹೇರಿಕೆ

ಹಿಜಾಬ್ ಮತ್ತು ಕೇಸರಿ ಶಾಲ್‌ನ ವಿವಾದ ಮಲೆನಾಡಿನಲ್ಲಿ ತಾರಕಕ್ಕೇರಿದ್ದು, ಮಂಗಳವಾರ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಮತ್ತು ಬಿ ಎಚ್ ರಸ್ತೆಯ ಪದವಿಪೂರ್ವ ಕಾಲೇಜಿನಲ್ಲಿ ಕಲ್ಲು ತೂರಾಟ ನಡೆಸಿದವರ ಮೇಲೆ ಪೊಲೀಸರಿಂದ ಲಘು ಲಾಠಿ ಚಾರ್ಜ್ ನಡೆದಿದೆ. ನಗರದ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ನಗರದಲ್ಲಿ 144ನೆಯ ಕಲಂ ನ ಪ್ರಕಾರ ನಿಷೇಧಾಜ್ಞೆ ಹೇರಲಾಗಿದೆ.
ಎಂದಿನಂತೆ ಕಾಲೇಜು ಆರಂಭವಾದ ಬಳಿಕ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ಗುಂಪೊಂದು ಹಿಜಾಬ್ ವಿರೋಧಿಸಿ ಘೋಷಣೆ ಕೂಗಿದ್ದಲ್ಲದೆ ಕಾಲೇಜು ಎದುರಿರುವ ಧ್ವಜ ಸ್ಥಂಭವನ್ನೇರಿ ಕೇಸರಿ ಧ್ವಜ ಹಾರಿಸಿದ್ದಾರೆ. ಈ ಮಧ್ಯೆ ಇನ್ನೊಂದು ಸಮುದಾಯದ ಕೆಲವರು ಕಾಲೇಜು ಆವರಣ ಪ್ರವೇಶಿಸಲು ಮುಂದಾದಾಗ ಅವರನ್ನು ತಡೆದ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದರು. ಈ ಸಂದರ್ಭ ಉಭಯ ಕೋಮಿನ ವ್ಯಕ್ತಿಗಳು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸಿಟ್ಟಿಗೆದ್ದ್ದ ಗುಂಪೊಂದು ಮತ್ತೊಂದು ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿತು. ಪೊಲೀಸರಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದರಿಂದ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆನಂತರ ಹೆಚ್ಚಿನ ಪೊಲೀಸರನ್ನು ಕರೆಯಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.

ಬಿ ಎಚ್. ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ:

ಶಿವಮೊಗ್ಗ ನಗರದ ಬಿ ಎಚ್ ರಸ್ತೆಯಲ್ಲಿ ಪಿಯು ಕಾಲೇಜಿನೆದುರು ಉದ್ವಿಗ್ನ ಸ್ಥಿತಿ ಉಂಟಾಯಿತು. ಕೇಸರಿ ಶಾಲಿನವರು ಮತ್ತು ಇನ್ನೊಂದು ಸಮುದಾಯದವರು ಪ್ರತಿಭಟನೆಗೆ ಇಳಿದಿದ್ದರಿಂದ ರಸ್ತೆಯನ್ನೇ ಬಂದ್ ಮಾಡಲಾಯಿತು. ಕಾನ್ವೆಂಟ್ ರಸ್ತೆ, ಮುಸ್ಲಿಂ ಹಾಸ್ಟೆಲ್ ರಸ್ತೆ ಮತ್ತು ಬಸವೇಶ್ವರ ವೃತ್ತದಲ್ಲಿಯೂ ಪ್ರತಿಭಟನೆ ನಡೆದವು. ಇದರಿಂದ ವಾಹನ ಸವಾರರು ಸಾಕಷ್ಟು ಪರದಾಡಬೇಕಾಯಿತು.
ಕೆಲವೆಡೆ ಪೊಲೀಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಡಿವಿಎಸ್ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ಬಂದವರಿಗೆ ಪೊಲೀಸರು ಒಳಪ್ರವೇಶಕ್ಕೆ ನಿರಾಕರಿಸಿದರು. ಈ ಸಂದರ್ಭದಲ್ಲಿ ನೂಕಾಟ ನಡೆಯಿತು. ಆದರೆ ಪೊಲೀಸರು ಬೆತ್ತದ ರುಚಿ ತೋರಿಸಿ ಅವರನ್ನು ನಿಗ್ರಹಿಸುವಲ್ಲಿ ಯಶಸ್ವಿಯಾದರು. ಎಸ್ ಆರ್ ಎನ್ ಎಂ ಕಾಲೇಜಿನಲ್ಲೂ ಕಲ್ಲು ತೂರಿ ಕಿಟಕಿಯ ಗಾಜನ್ನು ಒಡೆದುಹಾಕಲಾಗಿದೆ.
ಈ ಮಧ್ಯೆ ಕೆಲವು ವಿದ್ಯಾಥಿಗಳ ಗುಂಪು ಡಿಸಿ ಕಚೇರಿಗೆ ಧಾವಿಸಿ ಪ್ರತಿಭಟನೆ ನಡೆಸಲು ಹಿಜಾಬ್ ಧರಿಸಿದವರಿಗೆ ಅವಕಾಶ ಕೊಡಬಾರದೆಂದು ಆಗ್ರಹಿಸಿದರು. ಪೊಲೀಸರು ಎರಡೂ ಕೋಮಿನವರ ಮಧ್ಯೆ ಸಾಮರಸ್ಯ ಮೂಡಿಸಲು ಹರಸಾಹಸ ಪಟ್ಟರೂ ಯಶಸ್ವಿಯಾಗಲಿಲ್ಲ. ಮೊದಲು ಕೇಸರಿ ಶಾಲ್ ಹಾಕಿದವರ ಮನವೊಲಿಸಿ ಪೊಲೀಸರು ಮನೆಗೆ ಕಳುಹಿಸಿದರು. ಆನಂತರ ಮತ್ತೊಂದು ಕೋಮಿನವರ ಮಕ್ಕಳನ್ನು ಅವರ ಪೋಷಕರ ಮೂಲಕ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.
ಬಾಪೂಜಿನಗರ ಕಾಲೇಜಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಾಲೇಜು ಸಂಪರ್ಕಿಸುವ ಎಲ್ಲ ರಸ್ತೆ ಬಂದ್ ಮಾಡಲಾಗಿತ್ತು. ಗುಪ್ತಚರ ಮಾಹಿತಿ ಇದ್ದುದರಿಂದ ಎಲ್ಲಾ ಕಾಲೇಜುಗಳ ಬಳಿ ಈ ವೇಳೆ ಸಾಕಷ್ಟು ಪೊಲೀಸ್ ಪಹರೆ ಹಾಕಲಾಗಿತ್ತು. ಆನಂತರ ಎಲ್ಲಿಯೂ ಗಲಾಟೆ ನಡೆಯಲಿಲ್ಲ. ಬಿಗಿ ಬಂದೋಬಸ್ತ್ ಮುಂದುವರೆದಿದೆ. ಮಧ್ಯಾಹ್ನದವರೆಗೆ ಗಲಾಟೆಯಲ್ಲೇ ನಗರದ ಬೀದಿಗಳು ತುಂಬಿಹೋದವು. ಎಲ್ಲಿ ಏನಾಗುತ್ತಿದೆ ಎಂದು ಅರಿಯದ ಸ್ಥಿತಿ ನಿರ್ಮಾಣವಾಗಿತ್ತು. ಬಹುತೇಕ ಕಾಲೇಜುಗಳು ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಿದವು. ಮಧ್ಯಾಹ್ನದ ನಂತರ ಬೀದಿಗಳು ಬಿಕೋ ಎನ್ನುವಂತಾಯಿತು. ನಿಷೇಧಾಜ್ಞೆ ಸಹ ಹೇರಿದ್ದರಿಂದ ಅಂಗಡಿಗಳೂ ಮುಚ್ಚಿದವು. ಮಂಗಳವಾರದ ವಾರದ ಸಂತೆಗೆ ಬಂದವರು ಅರ್ಧದಲ್ಲೇ ಸಂತೆ ಮುಗಿಸಬೇಕಾದ ಸ್ಥಿತಿ ಎದುರಾಯಿತು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ. ಎಸ್. ಪಿ ಲಕ್ಷ್ಮೀಪ್ರಸಾದ್ ನಗರದಲ್ಲಿ ಸಂಚರಿಸುತ್ತಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ಬಂದೋಬಸ್ತ್ ಹಾಕಿದ್ದಾರೆ.

ನಿಷೇಧಾಜ್ಞೆ

ಶಿವಮೊಗ್ಗ ನಗರದ ಮೀನಾಕ್ಷಿ ಭವನದಲ್ಲಿ ಕೇಸರಿ ಶಾಲು ಹಾಕಿದವನ ವಿಡಿಯೋ ತೆಗೆಯಲಾಗಿದೆ ಎಂಬ ಹಿನ್ನೆಲೆಯಲ್ಲಿ ಆ ಯುವಕನ ಮೇಲೆ ಕಲ್ಲು ತೂರಿದ ಘಟನೆ ವರದಿಯಾಗಿದೆ. ಕಾಲೇಜುಗಳಲ್ಲೂ ಕಲ್ಲು ತೂರಿದ ಘಟನೆ ನಡೆದಿದ್ದರಿಂದ ಮುನ್ನೆಚ್ಚರಿಕೆಯಾಗಿ ಮಂಗಳವಾರ ಮತ್ತು ಬುಧವಾರಕ್ಕೆ ಅನ್ವಯವಾಗುವಂತೆ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಬಾಪೂಜಿನಗರ ಕಾಲೇಜಿನೊಳಗಡೆ ಹಿಜಾಬ್ ಧರಿಸಿದವರನ್ನು ಬೆಂಬಲಿಸಿದ ಯುವಕರು ಕಲ್ಲು ತೂರಿದ ಕಾರಣ ಮಧ್ಯಾಹ್ನದ ವೇಳೆ ಕೇಸರಿ ಶಾಲಿನವರು ಈ ಬಗ್ಗೆ ಕ್ಷಮೆ ಕೇಳುವಂತೆ ಆಗ್ರಹಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕಲ್ಲು ತೂರಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯನ್ನು ಸುಮೊಟೊ ಪ್ರಕಾರ ದಾಖಲಿಸಬೇಕು ಮತ್ತು ಯುವಕರನ್ನು ಕರೆಯಿಸಿ ಕ್ಷಮೆ ಯಾಚಿಸಲು ಸೂಚಿಸಬೇಕೆಂದು ಆಗ್ರಹಿಸಿದರು.
ಗುಂಪುಗುಂಪಾಗಿ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಬರಲಾರಂಭಿಸಿದ್ದರಿಂದ ಮೊಬೈಲಿನಲ್ಲ್ಲಿ ಫೋಟೊ ಸೆರೆಹಿಡಿದವನನ್ನು ಪೊಲೀಸ್ ವ್ಯಾನಿನಲ್ಲಿ ಕೂಡ್ರಿಸಿ ರಕ್ಷಿಸಲಾಯಿತು. ಆನಂತರ ಮುಖ್ಯ ರಸ್ತೆಗೆ ಬಂದು ಗುಂಪು ಕಟ್ಟಿಕೊಂಡು ಎರಡೂ ಕಡೆಯ ಯುವಕರು ಮತ್ತೆ ಚರ್ಚಿಸಲಾರಂಭಿಸಿದರು. ಅಲ್ಲಿಗೆ ಧಾವಿಸಿದ ಪೊಲೀಸರು ಎಲ್ಲರನ್ನೂ ಚದುರಿಸಿದರು. ಈ ವೇಳೆ ಸಹ ಕಲ್ಲುತೂರಾಟ ನಡೆಯಿತು.
ಪಕ್ಕದ ಲಷ್ಕರ್ ಮೊಹಲ್ಲಾದಲ್ಲಿ ಅಲ್ಲಲ್ಲ್ಲಿ ಗುಂಪುಕೂಡಿಕೊಂಡು ಯುವಕರು ನಿಂತಿದ್ದನ್ನೂ ಸಹ ಪೊಲೀಸರು ಚದುರಿಸಿ ಓಡಿಸಿದರು.


ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಸಾಗರ : ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬು ಮತ್ತು ಕೇಸರಿ ಶಾಲು ನಡುವಿನ ಹೋರಾಟ ವಿಕೋಪಕ್ಕೆ ತಿರುಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡು ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲೇಜಿನಲ್ಲಿ ಮಂಗಳವಾರ ಕೆಲವು ವಿದ್ಯಾರ್ಥಿನಿಯರು ಹಿಜಾಬು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಾಚಾರ್ಯರು ಮತ್ತು ಕೆಲವು ಉಪನ್ಯಾಸಕರು ಹಿಜಾಬು ಧರಿಸಿ ಬಂದ ವಿದ್ಯಾರ್ಥಿಗಳನ್ನು ಕೋಣೆಯೊಂದರಲ್ಲಿ ಕೂರಿಸಿ ಸಮವಸ್ತ್ರದ ಬಗ್ಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ತಮ್ಮನ್ನು ಕೋಣೆಯಲ್ಲಿ ಕೂರಿಸಿರುವ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಆಗ ಪೋಷಕರು ತಮ್ಮ ಮಕ್ಕಳನ್ನು ವಿಚಾರಿಸಲು ಕಾಲೇಜಿಗೆ ಬಂದಿದ್ದಾರೆ.
ಇದೇ ಸಂದರ್ಭದಲ್ಲಿ ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ. ಆಗ ಪ್ರಾಚಾರ್ಯರು ಅವರನ್ನು ಕೇಸರಿ ಶಾಲು ತೆಗೆದು ಒಳಗೆ ಬರುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಣ್ಣದಾಗಿ ಹೊತ್ತಿಕೊಂಡ ಗಲಾಟೆ ದೊಡ್ಡ ಸ್ವರೂಪ ಪಡೆದು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕೇಸರಿ ಶಾಲು ತಿರುಗಿಸಿ ಜೈ ಶ್ರೀರಾಮ್, ಜೈಶಿವಾಜಿ ಘೋಷಣೆ ಕೂಗಲು ಪ್ರಾರಂಭಿಸಿದರು.
ಇದೇ ಸಂದರ್ಭದಲ್ಲಿ ಹಿಜಾಬು ಧರಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಹಿಜಾಬು ಧರಿಸುವುದು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಸಹ ಅದೇ ಮಾರ್ಗದಲ್ಲಿ ಘೋಷಣೆ ಕೂಗುತ್ತಾ ಬಂದರು.
ಕಲ್ಲು ತೂರಾಟ – ಲಾಠಿ ಚಾರ್ಜ್ :
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್ ನಡೆದು ೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡರು. ಉಪವಿಭಾಗಾಧಿಕಾರಿಗಳ ಕಚೇರಿ ಎದುರು, ರಿಲೆಯನ್ಸ್ ಪೆಟ್ರೋಲ್ ಬಂಕ್ ಮತ್ತು ಡಿವೈಎಸ್‌ಪಿ ಕಚೇರಿ ಹತ್ತಿರ ಕಲ್ಲು ತೂರಾಟ ನಡೆದಿದೆ.
ಜೋಗ ಬಸ್ ನಿಲ್ದಾಣದಲ್ಲಿ ಎರಡೂ ಕೋಮಿನವರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪರಸ್ಪರ ಘೋಷಣೆ ಕೂಗತೊಡಗಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ವಿದ್ಯಾರ್ಥಿಗಳನ್ನು ಚದುರಿಸಿದರು.

ಶಾಸಕರ ಭೇಟಿ

ಶಾಸಕ ಹಾಲಪ್ಪ ಹರತಾಳು ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸಿವಿಲ್ ಸರ್ಜನ್ ಡಾ. ಪರಪ್ಪ ಅವರಿಗೆ ಸೂಚನೆ ನೀಡಿದರು. ನಂತರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಸಮಾಧಾನ ಹೇಳಿ, ಸರ್ಕಾರದ ನಿಯಮ ಪಾಲನೆ ಮಾಡಿ. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ಶಾಂತಿ ಕಾಪಾಡಲು ಮನವಿ
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಉಪನ್ಯಾಸಕರ ಜೊತೆ ಸಭೆ ನಡೆಸಿ ಮಾತನಾಡಿದ ಶಾಸಕ ಎಚ್.ಹಾಲಪ್ಪ ಹರತಾಳು, ಸರ್ಕಾರ ಶಾಲಾಕಾಲೇಜಿನಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಶಿಕ್ಷಣ ಸಚಿವರು ಸಹ ಸಮವಸ್ತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಯಾರೂ ಮಾಡಬಾರದು. ಈಗಾಗಲೆ ನ್ಯಾಯಾಲಯದ ತೀರ್ಪಿನ ನಿರೀಕ್ಷೆಯಲ್ಲಿ ನಾವಿದ್ದೇವೆ ಪೋಷಕರು ವಿದ್ಯಾರ್ಥಿಗಳ ಪರವಾಗಿ ಅನಗತ್ಯವಾಗಿ ಕಾಲೇಜಿಗೆ ಬರಬಾರದು. ಶಾಲಾ ಕಾಲೇಜು ಆವರಣದಲ್ಲಿ ಮಕ್ಕಳ ಹೊಣೆಗಾರಿಕೆ ನಮ್ಮದಾಗಿರುತ್ತದೆ. ಅನಗತ್ಯವಾಗಿ ಪೋಷಕರು ಕಾಲೇಜಿನ ಒಳಗೆ ಬಂದು ಶಾಂತಿ ಕದಡುವ ಪ್ರಯತ್ನ ನಡೆಸಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ್ ಮಾತನಾಡಿ, ಬೆಳಿಗ್ಗೆ ಕಾಲೇಜಿಗೆ ಹಿಜಾಬು ಧರಿಸಿ ವಿದ್ಯಾರ್ಥಿನಿಯರು ಬಂದಾಗ ಅವರಿಗೆ ತಿಳಿವಳಿಕೆ ನೀಡಲು ಪ್ರಯತ್ನ ನಡೆಸಿದ್ದೇವೆ. ಅಷ್ಟರೊಳಗೆ ಬೇರೆಬೇರೆ ಘಟನೆ ನಡೆದಿದೆ. ಸರ್ಕಾರ ಸಮವಸ್ತ್ರ ನಿಯಮ ಜಾರಿಗೆ ತಂದಿದ್ದು ಅದನ್ನು ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದರು.

Ad Widget

Related posts

ಡಾ.ರಾಜೇಂದ್ರ ಕಿಶೋರ್ ಪಂಡಾ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

Malenadu Mirror Desk

ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ರಮೇಶ್ ಶಂಕರಘಟ್ಟ ನೇಮಕ

Malenadu Mirror Desk

ಸಿಗಂದೂರು ದೇಗುಲ ಹೋಟೆಲ್ ಕಟ್ಟಡ ತೆರವಿಗೆ ಕೋರ್ಟ್ ಆದೇಶ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.