ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಮರಳು ಮಾಫಿಯಾದಿಂದ ಹಣ ಪಡೆದಿದ್ದಾರೆಂಬ ನನ್ನ ಆರೋಪಕ್ಕೆ ಈಗಲೂ ಬದ್ಧವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ನಾನು ತಯಾರಿದ್ದೇನೆ. ಫೆ.೨೪ ರ ನಂತರ ಅವರು ನಿಗಧಿ ಮಾಡುವ ದಿನಾಂಕದಂದು ಧರ್ಮಸ್ಥಳಕ್ಕೆ ಬರುತ್ತೇನೆ. ಹಾಲಪ್ಪ ಅವರು ತಮ್ಮ ಸಹಾಯಕ ವಿನಾಯಕ ಭಟ್‌ರನ್ನೂ ಕರೆದುಕೊಂಡು ಬರಬೇಕೆಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಮಂಗಳವಾರ ಶಿವಮೊಗ್ಗ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ದಂಧೆಕೋರರ ಅಕ್ರಮ ವ್ಯವಹಾರದ ಪಾಲುದಾರರೇ ಆಣೆ-ಪ್ರಮಾಣಕ್ಕೆ ಬರುತ್ತೇವೆ ಎಂದು ಹೇಳಿದ ಮೇಲೆ ನಾನೇಕೆ ಸುಮ್ಮನಿರಲಿ. ಫೆ.೧೩ ರಂದು ನಾನು ಹೋಗಲು ಸಿದ್ಧನಿದ್ದೆ. ಆದರೆ ಅವರು ಇದ್ದಕ್ಕಿದ್ದ ಹಾಗೇ ಅದನ್ನು ಫೆ.೧೨ ಕ್ಕೆ ಬದಲಿಸಿದರು. ಅಂದು ನನಗೆ ಗೋವಾ ಚುನಾವಣೆ ಪ್ರಚಾರಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಗಿದೆ. ಫೆ.೨೨ ರ ತನಕ ನಾನು ಗೋವಾದಲ್ಲಿರುವೆ ಆ ಬಳಿಕ ಅವರು ಹೇಳಿದ ದಿನಾಂಕದಂದು ಧರ್ಮಸ್ಥಳಕ್ಕೆ ಬರುವೆ ಎಂದು ಹೇಳಿದರು.
ಹಾಲಪ್ಪರು ತಮ್ಮ ವ್ಯವಹಾರ ಮಾಡುವುದೇ ಈ “ವಿನಾಯಕನ ಹುಂಡಿ’ಮೂಲಕ ಅಕ್ರಮ ಮರಳು ಕ್ವಾರಿ ಮಾಲೀಕರಿಂದ ಹಣ ಪಡೆಯವುದೇ ಈ ಹುಂಡಿ ಮೂಲಕ. ತಾಲೂಕಿನಲ್ಲಿ ಯಾವುದೇ ಕಾಮಗಾರಿ ಆಗಬೇಕಾದರೂ ಮೊದಲು ಈ ವಿನಾಯಕನ ಹುಂಡಿಗೆ ಕಾಣಿಕೆ ಬಿದ್ದ ಮೇಲೆ ಎಲ್ಲವೂ ನಡೆಯುತ್ತದೆ. ಆದ್ದರಿಂದ ಆಣೆ ಪ್ರಮಾಣಕ್ಕೆ ವಿನಾಯಕ ಭಟ್ ಕೂಡಾ ಬರಬೇಕು ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಹಾಲಪ್ಪರಿಗೆ ಆಣೆ ಮಾಡುವುದು ಮಾತಿಗೆ ತಪ್ಪುವುದು ಮಾಮೂಲಿಯಾಗಿದೆ. ಸಾಗರದ ರಸ್ತೆ ಅಗಲೀಕರಣದ ಸಂದರ್ಭ ರಸ್ತೆ ಒಂದು ಬದಿಯ ಮರ ಕಡಿಯುವುದಾಗಿ ಪರಿಸರ ಹೋರಾಟಗಾರರಿಗೆ ಹೇಳಿದ್ದರು. ಈ ಸಂಬಂಧ ಸಿಗಂದೂರು ದೇವಿ ಮೇಲೆ ಆಣೆ ಮಾಡಿದ್ದರು. ಆದರೆ ಈಗ ಎರಡೂ ಕಡೆಯ ಮರ ಕಡಿದು ಈಗ ಮಾತು ಮುರಿದಿದ್ದಾರೆ. ಇವರಿಗೆ ಮಾತು ಕದಿಯುವುದು ಮಾಮೂಲಿಯಾಗಿದೆ ನಾನು ಹಾಗಿಲ್ಲ ಎಂದು ಬೇಳೂರು ಹೇಳಿದರು.
ಕಮೀಷನ್ ವ್ಯವಹಾರ:
ತಾಲೂಕಿನಲ್ಲಿ ಗುತ್ತಿಗೆದಾರ ಸಭೆ ನಡೆಸಿರುವ ಹಾಲಪ್ಪ ಅವರು, ಅವರ ಎಲ್ಲ ಮೊಬೈಲ್‌ಗಳನ್ನು ತೆಗೆದಿಟ್ಟುಕೊಂಡು ಕಮೀಷನ್ ವ್ಯವಹಾರ ಮಾಡುತ್ತಾರೆ. ತಾಲೂಕಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಬಂದ ೧೯ ಕೋಟಿ ಕಾಮಗಾರಿಯನ್ನು ಕೆ.ಆರ್.ಎಲ್.ಡಿ. ಮತ್ತು ನೀರಾವರಿ ನಿಗಮದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಇದು ಕಮೀಷನ್ ಹೆಚ್ಚಿಸಿಕೊಳ್ಳುವುದರ ಒಂದು ಭಾಗವಾಗಿದೆ ಎಂದು ಆರೋಪಿಸಿದ ಬೇಳೂರು, ರಾಜ್ಯದಲ್ಲಿ ಇಂತಹ ಕೆಟ್ಟ ಶಾಸಕ ಯಾರೂ ಇಲ್ಲ. ಎಲ್ಲಾ ಸ್ವಾರ್ಥಕ್ಕೆ ಮಾಡುತ್ತಾರೆ. ನಾನು ಶಾಸಕನಾಗಿದ್ದ ಸಂದರ್ಭ ಕಮೀಷನ್ ಪಡೆದಿದ್ದೇನೆ ಎಂದು ಭಾಷಣ ಮಾಡ್ತಾರೆ. ಈ ವಿಚಾರದಲ್ಲೂ ನಾನು ಪ್ರಮಾಣ ಮಾಡಲು ಸಿದ್ದ ಎಂದು ಸವಾಲು ಹಾಕಿದರು.
ಬಿಜೆಪಿ ಸರಕಾರ ಪತನ ಸನ್ನಿಹಿತ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಒಂದು ವೇಳೆ ಅದು ಆದರೆ ಸರಕಾರ ಬಿದ್ದುಹೋಗಲಿದೆ.
ಶಾಸಕರಾದ ರೇಣುಕಾಚಾರ್ಯ, ಯತ್ನಾಳ್, ಜಾರಕಿಹೊಳಿ ರಮೇಶ್ ಇವರೆಲ್ಲ ಹೋಗುತ್ತಿರುವ ರೀತಿ ನೋಡಿದರೆ, ಬಿಜೆಪಿಗೆ ಮುಳುಗುನೀರು ಸನ್ನಿಹಿತವಾಗುತ್ತಿದೆ ಎನಿಸುತ್ತಿದೆ.
ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಸಲಹೆ ಪಡೆದು ಆಡಳಿತ ನಡೆಸುತ್ತಿದ್ದಾರೆ. ಸಂಪುಟ ವಿಸ್ತರಣೆ ಆದರೆ ಬಿದ್ದು ಹೋಗಲಿದೆ ಎಂದು ಬೇಳೂರು ಟೀಕಿಸಿದರು.
ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಅಂಜಿಕೆ ಇರುವ ಕಾರಣ ಸರಕಾರ ಅದನ್ನು ಕುಂಟುನೆಪವೊಡ್ಡಿ ಮುಂದೆ ಹಾಕುತ್ತಿದೆ.
ಶಾಸಕರುಗಳೇ ಈಗ ದರ್ಬಾರ್ ನಡೆಸುತ್ತಿದ್ದು, ಜಿಲ್ಲಾ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ಈಶ್ವರಪ್ಪ ಬಾಯಿಬಿಟ್ಟರೆ, ಸುಳ್ಳು ಹೇಳುತ್ತಾರೆ, ಮಾರ್ಚ್‌ಗೆ ಚುನಾವಣೆ ಎಂದು ಸುಳ್ಳು ಹೇಳ್ತಾರೆ. ಸರಕಾರಕ್ಕೆ ಸೋಲಿನ ಭಯ ಇರುವ ಕಾರಣ ಚುನಾವಣೆಗೆ ಹೋಗುತ್ತಿಲ್ಲ ಎಂದು ಬೇಳೂರು ಹೇಳಿದರು.ಪ್ರಮುಖರಾದ ಜಿ.ಡಿ.ಮಂಜುನಾಥ್, ರಾಜಶೇಖರ್ ಮತ್ತಿತರರಿದ್ದರು.
ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪ ಅವರ ಮಗ ಮಂತ್ರಿಯಾಗಲು ಅಡ್ಡಗಾಲಾಗಿದ್ದಾರೆ. ಹಿಂದೆ
ಯಡಿಯೂರಪ್ಪ ಸಿಎಂ ಆದ ಸಂದರ್ಭ ಶೋಭಾರನ್ನು ಯಡಿಯೂರಪ್ಪ ಅವರ ಮಕ್ಕಳು ದೂರ ಇಟ್ಟಿದ್ದರು.
ಆ ಸೇಡು ತೀರಿಸಿಕೊಳ್ಳಲು ಶೋಭಾ ಅವರು ಈಗ ಬಿಎಸ್‌ವೈ ಮಕ್ಕಳಿಗೆ ಅಡ್ಡಿಯಾಗಿದ್ದಾರೆ.
- ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ, ಕೆಪಿಸಿಸಿ ವಕ್ತಾರ