ಮಲೆನಾಡಿನ ಪ್ರಸಿದ್ದ ದೈವ ಕ್ಷೇತ್ರ ಹೊಸನಗರ ತಾಲೂಕು ಜೇನುಕಲ್ಲಮ್ಮ ದೇವಿ. ಅದರಲ್ಲೂ ಮಲೆನಾಡಿನ ದೀವರು ಸಮುದಾಯ ಜೇನುಕಲ್ಲಮ್ಮನಿಗೆ ನಡೆದುಕೊಳ್ಳುವುದು ಹೆಚ್ಚು. ಹೊಸನಗರ ತಾಲೂಕಿನಾದ್ಯಂತ ಇರುವ ಈ ಸಮುದಾಯ ಜೇನುಕಲ್ಲಮ್ಮ ದೇವಿಯನ್ನು ತಮ್ಮ ಮನೆದೇವರೆಂದೇ ಪೂಜಿಸುತ್ತಾರೆ. ದೀವರ ಅಸ್ಮಿತೆಯಾದ ತಾಯಿಯನ್ನು ಪೂಜಿಸುವ ಕುಟುಂಬಗಳು ಕುಲದೇವತೆ ಜೇನುಕಲ್ಲಮ್ಮ ದೇವಿಗೆ ಪೂಜೆ ಅರ್ಪಿಸುವ ಈ ಪ್ರತಿಷ್ಠಿತ ಧಾರ್ಮಿಕ ಕಾರ್ಯಕ್ಕೆ “ಅಮ್ಮನ ಹಬ್ಬ” ಎಂದೇ ಕರೆಯುವುದು ಪ್ರತೀತಿ.
ಮಾಜಿ ಶಾಸಕ ಬಿ.ಸ್ವಾಮಿರಾವ್ ಸಮಾಜವಾದಿ ಹೋರಾಟಗಾರರು ಹಾಗೂ ಮೂರು ಬಾರಿ ಶಾಸಕರಾಗಿ ಬಡವರಿಗೆ ಭೂಮಿಯ ಹಕ್ಕು ಕೊಡಿಸುವಲ್ಲಿ ಮುಂಚೂಣಿ ಪಾತ್ರವಹಿಸಿದವರು. ಇವತ್ತಿಗೂ ಬಡವರ ಕಾಳಜಿ ಮತ್ತು ಬದ್ಧತೆಯನ್ನೂ ಹೊಂದಿದವರು. ಪ್ರಸ್ತುತ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಇವರ ಮನೆಯಲ್ಲಿ ಸುಮಾರು 25 ವರ್ಷಗಳ ಬಳಿಕ ಅಮ್ಮನ ಹಬ್ಬವನ್ನು ಮಂಗಳವಾರ ಆಚರಿಸುತ್ತಿದ್ದಾರೆ. ಹೆಸರಿಗೆ ಸ್ವಾಮಿರಾವ್ ಮನೆಯಲ್ಲಿ ಮನೆದೇವತೆ ಪೂಜೆ ಆದರೂ ಇದೊಂದು ಊರ ಹಬ್ಬದಂತೆ ಆಚರಿಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆಯಿಂದ ವಿವಿಧ ಪೂಜಾ ವಿಧಿವಿಧಾನಗಳು ದೀವರ ಸಾಂಪ್ರದಾಯಿಕ ಪದ್ದತಿಯಂತೆಯೇ ನಡೆಯಲಿದ್ದು, ಬಂಧು ಬಳಗ ಮಾತ್ರವಲ್ಲದೆ ಸಾವಿರಾರು ಜನರೂ ಈ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಲಿದ್ದಾರೆ. ಮಾರಿ ಹಬ್ಬದ ಮಾದರಿಯಲ್ಲಿ ಬಂಧು-ಬಳಗ ಹಾಗೂ ಪರಿಚಿತ, ಹಿತೈಷಿಗಳಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಈ ಅಮ್ಮನ ಹಬ್ಬದ ವೈಶಿಷ್ಟ್ಯವೆಂದರೆ ಹಬ್ಬಕ್ಕೆ ಬನ್ನಿ ಎಂದು ಕರೆಯಬೇಕಿಲ್ಲ. ವಿಷಯ ತಿಳಿದು ಹಬ್ಬಕ್ಕೆ ಬಂದರೂ ಆದರ ಆತಿಥ್ಯವಿರುವುದು ಮಲೆನಾಡಿನಲ್ಲಿರುವ ರೂಢಿ. ದಿನಪೂರ್ತಿ ನಡೆವ ಪೂಜಾ ಕಾರ್ಯದ ಬಳಿಕ ಸಂಜೆ ಪ್ರಸಾದ ವಿನಿಯೋಗ ಇರುತ್ತದೆ.
ನಾನು ಚಿಕ್ಕವನಾಗಿರುವಾಗ ಅಮ್ಮನ ಹಬ್ಬ ಅಚರಣೆ ಮಾಡಿರುವ ನೆನಪಿದೆ. ಮಂಗಳವಾರ ತಂದೆ-ತಾಯಿಯ ಆಶಯದಂತೆ ಮನೆದೇವತೆ ಪೂಜೆ ನೆರವೇರುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚು ಜನರು ಹಾಗೂ ಬಂಧುಗಳು ಸೇರುವ ನಿರೀಕ್ಷೆಯಿದೆ. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಇದೊಂದು ನಮ್ಮ ಸಂಪ್ರದಾಯ ಮತ್ತು ಊರ ಹಬ್ಬದಂತೆ ಆಚರಿಸುತ್ತಿದ್ದೇವೆ.
ಸುರೇಶ್ ಸ್ವಾಮಿರಾವ್, ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ