ಮಲೆನಾಡಿನ ಪ್ರಮುಖ ಸಮಸ್ಯೆಯಾದ ಬಗರ್ ಹುಕುಂ ಸಾಗುವಳಿಗೆ ಹಕ್ಕುಪತ್ರ ಮತ್ತು ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ರೈತ ಸಮುದಾಯಕ್ಕೆ ಬಿಸಿಲು ಕುದುರೆಯಂತೆಯೇ ಭಾಸವಾಗುತ್ತಿದೆ. ಪ್ರತಿ ಚುನಾವಣೆ ಬಂದಾಗಲೂ ಈ ಸಮಸ್ಯೆಯೇ ಪ್ರಮುಖವಾಗಿರುತ್ತದೆ. ಮತ್ತೊಂದು ಚುನಾವಣೆಯಲ್ಲಿಯೂ ಇದೇ ಪ್ರಮುಖ ಸಮಸ್ಯೆ. ಬಡವರಿಗೆ ಭೂಮಿ ಹಕ್ಕು ಕೊಡಿಸುವ ವಿಚಾರದಲ್ಲಿ ಸರಕಾರ ಬದ್ಧತೆ ತೋರಿಸದಿರುವುದೇ ಇದಕ್ಕೆ ಕಾರಣ. ಸೊರಬದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊದಬೇಕು ಮತ್ತು ಅರಣ್ಯ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ತಂದು ಪಾರಂಪರಿಕ ಅರಣ್ಯ ವಾಸಿಗಳು ಉಳುಮೆ ಮಾಡುವ ಭೂಮಿಗೆ ಹಕ್ಕುದಾರಿಕೆ ಕೊಡಬೇಕೆಂದು ಆಗ್ರಹಿಸಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸೊರಬ ಪಟ್ಟಣ್ಣದಲ್ಲಿರುವ ಶ್ರೀ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಿದ ಮಧು ಬಂಗಾರಪ್ಪ, ಟ್ಯ್ರಾಕ್ಟರ್‌ನಲ್ಲಿ ಸಾಗುವಳಿದಾರರೊಂದಿಗೆ ತಾಲೂಕು ಕಛೇರಿವರೆಗೆವರೆಗೆ ಸಾಗಿ ಸರಕಾರದ ನಡೆ ಖಂಡಿಸಿದರು. ಮೆರವಣಿಗೆ ಉದ್ದಕ್ಕೂ ಪ್ರತಿಭಟನಾ ನಿರತ ರೈತರು, ಅರಣ್ಯ ಭೂಮಿ,ಬಗರ್ ಹುಕುಂ ಸಾಗುವಳಿದಾರರ ಅರ್ಜಿ ವಜಾಗೊಳಿಸಿ,ಭೂಮಿ ಕಸಿದುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕೂಗಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಧುಬಂಗಾರಪ್ಪ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುತ್ತೇವೆ. ರೈತರ ಪರವಾಗಿ ಹೋರಾಟ ಮಾಡಿದ್ದೇನೆ. ನಾನು ಶಾಸಕನಾದ ಅವಧಿಯಲ್ಲಿ ಸಾವಿರಾರು ರೈತರಿಗೆ ಹಕ್ಕುಪತ್ರ ನೀಡಿದ್ದೇವೆ ಹೊರತು, ಮನೆ ಒಡೆಯುವ ಕೆಲಸ ಮಧು ಬಂಗಾರಪ್ಪ ಯಾವತ್ತೂ ಮಾಡಿಲ್ಲ, ಆದರೆ ಹಾಲಿ ಶಾಸಕರು ಹಿಂದೆ ನೀಡಿದ ಹಕ್ಕುಪತ್ರಗಳನ್ನು ವಜಾ ಮಾಡುವ ಕೆಲಸ ಮಾಡುವ ಮೂಲಕ ರೈತ ವಿರೋಧಿಯಾಗಿದೆ ನಡೆದುಕೊಂಡಿದ್ದಾರೆ ಎಂದು ಕುಮಾರ್ ಬಂಗಾರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಅವರಿಗೆ ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಲೇ ಸಮಯ ಇಲ್ಲ. ಅರಣ್ಯ ಹಕ್ಕು ಕಾಯಿದೆ ಸಮಸ್ಯೆ ಏನೆಂಬುದೇ ಅವರಿಗೆ ಗೊತ್ತಿಲ್ಲ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ೨೫ ಜನ ಸಂಸದರು ಸಂಸತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸಿಲ್ಲ.ಇವರಿಗೆ ಪ್ರಧಾನಿ ಎದುರು ನಿಂತು ರೈತರ ಬಗ್ಗೆ ಮಾತನಾಡುವ ಧೈರ್ಯವೇ ಇಲ್ಲ ಹೀಗಿರುವಾಗ ಸಮಸ್ಯೆ ಇತ್ಯರ್ಥ ಹೇಗಾಗುತ್ತದೆ ಎಂದರು.
ಹೋರಾಟದಿಂದ ಮಾತ್ರ ನ್ಯಾಯ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರೈತರಿಗೆ ನ್ಯಾಯ ಸಿಗಬೇಕಾದರೆ ಹೋರಾಟ ಮುಂದುವರಿಯಬೇಕು. ಭೂಹಕ್ಕಿಗಾಗಿ ರೈತರು ಇಟ್ಟಿರುವ ಹೋರಾಟದ ಹೆಜ್ಜೆಗೆ ನಾನು ಹೆಜ್ಜೆ ಹಾಕುತ್ತೇನೆ. ಉಳುವ ರೈತನಿಗೆ ಹಕ್ಕುದಾರಿಕೆ ಸಿಕ್ಕಾಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ. ಅರಣ್ಯ ಹಾಗು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಅನಿವಾರ್ಯವಾಗಿದೆ. ಭೂ ಹಕ್ಕು ವಂಚಿತರಾಗುವ ಭೀತಿ ಸಾಗುವಳಿದಾರರಿಗೆ ಎದುರಾಗಿದೆ. ಹೋರಾಟದಿಂದ ಮಾತ್ರ ನ್ಯಾಯ ಮಾತ್ರ ಸಿಗಬೇಕು. ಸೊರಬ ಮತ್ತು ಸಾಗರಗಳು ಹೋರಾಟದ ಭೂಮಿ ಇಲ್ಲಿಂದ ಹುಟ್ಟಿದ ಹೋರಾಟPಕ್ಕೆ ಯಾವತ್ತೂ ಜಯ ಸಿಗಲಿದೆ ಮಧು ಬಂಗಾರಪ್ಪರ ನಾಯಕತ್ವದಲ್ಲಿ ಹೋರಾಟವನ್ನು ನೀವೆಲ್ಲ ಮುಂದುವರಿಸಿ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಶಿಕಾರಿಪುರದ ನಗರದ ಮಹಾದೇವಪ್ಪ, ಲಕ್ಷ್ಮೀಕಾಂತ್ ಚಿಮನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಸಿ.ಪಾಟೀಲ್, ಅಣ್ಣಪ್ಪ ಹಾಲಘಟ್ಟ , ಮಹಿಳಾ ಅಧ್ಯಕ್ಷೆ ಸುಜಾತ ಶಿವಮೊಗ್ಗದ ಜಿ.ಡಿ ಮಂಜುನಾಥ್, ಗಣಪತಿ ಹುಲ್ತಿಕೊಪ್ಪ ಸೇರಿದಂತೆ ಅನೇಕ ಮುಖಂಡರಿದ್ದರು.
ರೈತರ ಹಕ್ಕು ಪತ್ರ ಕೊಡಿಸುವ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ. ಸರಕಾರ ರೈತರನ್ನು ಕಡೆಗಣಿಸಿದರೆ ಅದಕ್ಕೆ ಉಳಿಗಾಲವಿಲ್ಲ. ರೈತರು ಉಳುವ ಭೂಮಿಗೆ ಹಕ್ಕು ಪತ್ರ ಕೊಡದ ಸರಕಾರ ಅಧಿಕಾರದಲ್ಲಿರಲು ಅರ್ಹವಲ್ಲ
ಕಾಗೋಡು ತಿಮ್ಮಪ್ಪ, ಮಾಜಿ ಸಚಿವರು.
ಮಧುಬಂಗಾರಪ್ಪ ಇನ್ನು ಸುಮ್ಮನಿರುವುದಿಲ್ಲ. ರೈತರಿಗೆ ಅನ್ನ ಕೊಡುವ ಭೂಮಿಯನ್ನು ಕಸಿದುಕೊಂಡು ಅವರ ಮನೆ ಒಡೆಯುವವರಿಗೆ ಮುಂದಿನ ದಿನಗಳಲ್ಲಿ ರೈತರೇ ಪಾಠ ಕಲಿಸುತ್ತಾರೆ. ರೈತರ ಶಾಪ ಅವರಿಗೆ ತಟ್ಟದೇ ಬಿಡುವುದಿಲ್ಲ. ಸಮಸ್ಯೆ ಒಂದು ತಾರ್ಕಿಕ ಅಂತ್ಯಕ್ಕೆ ಬರುವ ತನಕ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ಇದು ನಿರಂತರವಾಗಿರಲಿದೆ
ಮಧು ಬಂಗಾರಪ್ಪ, ಮಾಜಿ ಶಾಸಕರು.