ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರ ಕುಲದೇವತೆ ಜೇನುಕಲ್ಲಮ್ಮ ದೇವಿಯ ಆರಾಧನಾ ಪದ್ಧತಿಯಾಗಿದ್ದ “ಅಮ್ಮನ ಹಬ್ಬ’ ಮಂಗಳವಾರ ಸೊನಲೆಯ ಅವರ ಮನೆಯಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡಿತು.
ನಾಡಿನ ಪ್ರಸಿದ್ದ ದೈವ ಕ್ಷೇತ್ರ ಹೊಸನಗರ ತಾಲೂಕು ಜೇನುಕಲ್ಲಮ್ಮ ದೇವಿ. ಮಲೆನಾಡಿನ ದೀವರು ಸಮುದಾಯ ಜೇನುಕಲ್ಲಮ್ಮನಿಗೆ ನಡೆದುಕೊಳ್ಳುವುದು ಹೆಚ್ಚು. ಹೊಸನಗರ ತಾಲೂಕಿನಾದ್ಯಂತ ಇರುವ ಈ ಸಮುದಾಯ ಜೇನುಕಲ್ಲಮ್ಮ ದೇವಿಯನ್ನು ತಮ್ಮ ಮನೆದೇವರೆಂದೇ ಪೂಜಿಸುತ್ತಾರೆ. ಅದೇ ರೀತಿ ೨೫ ವರ್ಷಗಳ ಬಳಿಕ ಸ್ವಾಮಿರಾವ್ ಕುಟುಂಬ ಸೊನಲೆಯ ತಮ್ಮ ಮನೆಯಲ್ಲಿ ದೀವರ ಸಂಪ್ರದಾಯದಂತೆ ಅಮ್ಮನ ಪೂಜೆ ನೆರವೇರಿಸಿದರು. ಬೆಳಗ್ಗೆಯಿಂದ ವಿವಿಧ ಪೂಜಾ ವಿದಿವಿಧಾನಗಳು ನಡೆದವು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮತ್ತಿತರರು ಲಕ್ಕಿಸೊಪ್ಪು ಕಟ್ಟಿಕೊಂಡು ದೇವಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಪೂಜೆ ನೆರವೇರಿಸಿದರು.
ಸಹಸ್ರಾರು ಜನರು ಭಾಗಿ
ರಾತ್ರಿ ನಡೆದ ರಾಶಿ ಪೂಜೆಯಲ್ಲಿ ಸಹಸ್ರಾರು ಜನರು ಭಾಗವಹಿಸಿ ಹಬ್ಬದ ರೀತಿ ರಿವಾಜುಗಳನ್ನು ಕಣ್ತುಂಬಿಕೊಂಡರು. ರಾಶಿ ಪೂಜೆಯಲ್ಲಿ ಕಡುಬು, ಅನ್ನದ ರಾಶಿ ಹಾಕಿ ದೇವಿಗೆ ಅರ್ಪಿಸಿ ಪ್ರಸಾದವಾದ ಬಳಿಕ ಸಾಮೂಹಿಕ ಬೋಜನಕ್ಕೆ ಅಪ್ಪಣೆಯಾಗವುದು ಪದ್ಧತಿ. ರಾಶಿ ಪೂಜೆ ಸಂದರ್ಭ ನಿಟ್ಟೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಕೃಷಿ ವಿವಿ ಕುಲಪತಿ ಪ್ರೊ.ಎಂ.ಕೆ.ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಪುರುಷೋತ್ತಮ್, ಚೇತನ್ ಕಣ್ಣೂರು, ಕಲ್ಲೂರು ಮೇಘರಾಜ್ ಸೇರಿದಂತೆ ಅನೇಕ ಮುಖಂಡರು ಸ್ವಾಮಿರಾವ್ ಅವರ ಒಡನಾಡಿಗಳು, ಬೆಂಬಲಿಗರು ಭಾಗವಹಿಸಿದ್ದರು. ವಿವಿಧ ಊರುಗಳಿಂದ ಬಂದ ಬಂಧುಗಳೊಂದಿಗೆ ಸುತ್ತಮುತ್ತಲ ಊರುಗಳು ಜನರು ತಡರಾತ್ರಿವರೆಗೂ ಬಂದು ಬೋಜನ ಸ್ವೀಕರಿಸಿದರು. ಸುರೇಶ್ ಸ್ವಾಮಿರಾವ್, ಸುಬ್ರಹ್ಮಣ್ಯ ಸೋದರರು ಬಂದ ಅತಿಥಿಗಳಿಂದ ಆದರದಿಂದ ಬರಮಾಡಿಕೊಂಡರು.
ದೇವಿಯ ಆರಾಧನೆ ಉದ್ದೇಶದಿಂದ ಅಮ್ಮನ ಹಬ್ಬ ಮಾಡುವ ಉದ್ದೇಶ ಬಹಳವರ್ಷಗಳಿಂದ ನಮಗಿತ್ತು. ಹಬ್ಬದ ಸಂದರ್ಭ ಬಂಧುಬಳಗ ಮತ್ತು ಸ್ನೇಹಿತರು ಅಭಿಮಾನಿಗಳು ಒಂದೆಡೆ ಸೇರಿಸಲು ಅವಕಾಶವಾಯಿತು. ಜನರನ್ನು ನೋಡಿ ತುಂಬಾ ಖುಷಿಯಾಯಿತು. ತಾಯಿ ಜೇನು ಕಲ್ಲಮ್ಮ ಈ ನಾಡಿಗೆ ಸುಖ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದೇವೆ
ಬಿ.ಸ್ವಾಮಿರಾವ್, ಮಾಜಿ ಶಾಸಕರು.