ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಅಂತಿಮ ಯಾತ್ರೆ ಸಂದರ್ಭ ನಡೆಸಿದ ಕಲ್ಲುತೂರಾಟ ಮತ್ತು ಆಸ್ತಿಪಾಸ್ತಿ ಹಾನಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.
ಉದ್ರಿಕ್ತ ಜನರನ್ನು ಹದ್ದುಬಸ್ತಿಗೆ ತರಲು ಟಿಯರ್ ಗ್ಯಾಸ್, ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಮೃತ ದೇಹದ ಮೆರವಣಿಗೆ ಸಂದರ್ಭ ತೀರ್ಥಹಳ್ಳಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಒಂದು ಬೈಕ್ ಮತ್ತು ತಳ್ಳುವ ಗಾಡಿಗೆ ಬೆಂಕಿ ಹಚ್ಚಲಾಯಿತು. ದಾರಿಯುದ್ದಕ್ಕೂ ಟೈರ್‌ಗೆ ಬೆಂಕಿ ಹಾಕಲಾಗಿತ್ತು.
ಸೀಗೆಹಟ್ಟಿ, ಇಮಾಮ್ ಬಾಡ, ಸಿದ್ದಯ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುವಾಗ ಕಲ್ಲುತೂರಾಟ ನಡೆದಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹಿಜಾಬ್ -ಕೇಸರಿ ಶಾಲು ಗಲಾಟೆ ಹೊತ್ತಿನಲ್ಲಿ ನಡೆದ ಈ ಕೊಲೆ ಮತ್ತು ಅದರ ನಂತರ ಆಗಬಹುದಾದ ಪರಿಣಾಮಗಳ ಬಗ್ಗೆ ಅಂದಾಜಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತೆಂಬ ಆರೋಪ ಕೇಳಿಬಂದಿದೆ.
ಹಿರಿಯ ಅಧಿಕಾರಿಗಳ ಉಸ್ತುವಾರಿ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಖುದ್ದಾಗಿ ನಗರಕ್ಕೆ ಭೇಟಿ ಮಾಡಿದ್ದರಿಂದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಸ್.ಮುರುಗನ್ , ಐಜಿ ತ್ಯಾಗರಾಜ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರೂ, ಪೊಲೀಸರ ಸಮ್ಮುಖದಲ್ಲಿಯೇ ಮೆರವಣಿಗೆ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲಾಗಿದೆ.
ಸಾವಿರಾರು ಮಂದಿ ಮೆರವಣಿಗೆ
ನಿಷೇಧಾಜ್ಞೆ ನಡುವೆಯೂ ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು, ಅದನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದರು. ಸ್ಥಳೀಯ ಶಾಸಕರೂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಮೃತನ ಅಂತಿಮ ದರ್ಶನ ಪಡೆದಿದ್ದು, ಘಟನೆಯನ್ನು ಖಂಡಿಸಿದರಲ್ಲದೆ, ಆರೋಪಿಗಳನ್ನು ಶೀಘ್ರವೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೇಳಿದಾಕ್ಷಣ ಎನ್‌ಕೌಂಟರ್ ಮಾಡಲಾಗದು
ಹರ್ಷನ ಸಾವು ಮತ್ತು ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿಯ ಬಗ್ಗೆ ಮಾಹಿತಿ ತಿಳಿದ ಸಚಿವ ಕೆ.ಎಸ್.ಈಶ್ವರಪ್ಪ ಬೆಂಗಳೂರಿನಿಂದ ದೌಡಾಯಿಸಿ ಬಂದವರೆ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಉದ್ರಿಕ ಜನರು ಈಶ್ವರಪ್ಪರ ಮೇಲೆ ರೇಗಾಡಿದ್ದೂ ಆಯಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲಿನ ನಿಲ್ಲಬೇಕು. ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಅವರು, ನೀವೂ ಹೇಳಿದಾಕ್ಷಣ ಎನ್‌ಕೌಂಟರ್ ಮಾಡಲಾಗದು. ಪೊಲೀಸರು ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಬೇಕೊ ಅದನ್ನು ಕೈಗೊಳ್ಳುತ್ತಾರೆ. ನಗರದಲ್ಲಿ ಶಾಂತಿ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ , ಮಾಜಿ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಆದ್ದರಿಂದ ಎಲ್ಲರೂ ಶಾಂತಿಯಿಂದ ಇರಬೇಕೆಂದು ಮನವಿ ಮಾಡಿದರು.
ಇಬ್ಬರು ಆರೋಪಿಗಳ ಬಂಧನ
ಹರ್ಷನ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಛಾಯಾಗ್ರಹಕನಿಗೆ ಗಾಯ
ಮೆರವಣಿಗೆ ಸಂದರ್ಭ ಎನ್.ಟಿ.ರಸ್ತೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಯ ಛಾಯಾಗ್ರಾಹಕ ಎಂ.ನಿಂಗನಗೌಡ ಅವರ ತಲೆಗೆ ಕಲ್ಲಿನೇಟು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.