ದಕ್ಷಿಣ ಕರ್ನಾಟಕ, ಕರಾವಳಿ ಭಾಗದಲ್ಲಿ ಶುದ್ದವಾದ ಕನ್ನಡ ಭಾಷೆ ನೆಲೆಯೂರಿದ್ದು, ಅದರಲ್ಲೂ ಯಕ್ಷಗಾನ ಕಲೆ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದು ಸಾಗರ-ಹೊಸನಗರ ಶಾಸಕ ಹೆಚ್. ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ನಡೆದ ಹದಿಮೂರನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ, ಹಾಸನ, ಮಂಡ್ಯ ಈ ಜಿಲ್ಲೆಗಳಲ್ಲಿ ಕೇವಲ ಕನ್ನಡವನ್ನು ವಿಶೇಷವಾಗಿ ಅಚ್ಚ ಕನ್ನಡವನ್ನು ಮಾತನಾಡುತ್ತಾರೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ತುಳು ಸೇರಿದಂತೆ ನಾಲ್ಕೈದು ಭಾಷೆಗಳನ್ನು ಮಾತನಾಡುತ್ತಾರೆ.ಇದರ ಮಧ್ಯ ಕನ್ನಡವನ್ನು ಶುದ್ದವಾಗಿ ಆಡುತ್ತಾರೆ. ಇಲ್ಲಿಯ ಯಕ್ಷಗಾನ ಕಲೆಯಲ್ಲಿ ಕನ್ನಡ ಭಾಷೆಯನ್ನು ಶುದ್ದವಾಗಿ ಬಳಸಲಾಗುತ್ತದೆ. ಹಾಗಾಗಿ ಇಲ್ಲಿ ಕನ್ನಡದ ಶ್ರೀಮಂತಿಕೆಯನ್ನು ಕಾಣಬಹುದಾಗಿದೆ ಎಂದರು.
ಸಾಗರದ ಮೂಲದವರಾದ ಮಂಜುನಾಥ್ ಸಾಗರ್ ನೇತೃತ್ವದಲ್ಲಿ ಹೊರ ರಾಜ್ಯಗಳು ಸೇರಿದಂತೆ ಬೇರೆ ದೇಶಗಳಲ್ಲಿ ಇಂತಹ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ಸಂಸ್ಕೃತಿಯನ್ಬು ಎತ್ತಿ ಹಿಡಿಯುವ ಜತೆಗೆ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಖ್ಯಾತ ನಟ ಮುಖ್ಯಮಂತ್ರಿ ಚಂದ್ರು, ದೂರದರ್ಶನ ಚಂದನವಾಹಿನಿಯ ನಿವೃತ್ತ ಮಹಾ ನಿರ್ದೇಶಕ ನಾಡೋಜ ಮಹೇಶ್ ಜೋಶಿ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜಿ.ಎ.ಬಾವಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
previous post