ದಾನ ನೀಡುವುದು ಒಂದು ಉತ್ತಮ ಸಂಸ್ಕೃತಿಯ ಲಕ್ಷಣ. ಹಾಗಂತ ಅಯೋಗ್ಯನಿಗೆ ದಾನ ನೀಡಿದರೆ ಅದು ಸಾರ್ಥಕವಾಗುವುದರ ಬದಲು ವ್ಯರ್ಥವಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗ್ರಾಮ ದೇವರಾದ ಬಯಲು ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.
ದಾನವು ಸುಸಂಸ್ಕೃತ ಮನಸ್ಸಿನ ಸಂಸ್ಕಾರದ ತುರೀಯ ಭಾವ. ಈ ದಾನ ದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ಸುಂದರ ಭೂಮಂಡಲವನ್ನು ಭಗವಂತ ಸಕಲ ಜೀವ ರಾಶಿಗಳಿಗೆ ದಾನವಾಗಿ ನೀಡಿದ್ದಾನೆ. ಎಲ್ಲಾ ಪ್ರಾಣಿ ಪಕ್ಷಿಗಳು ಈ ಪ್ರಕೃತಿಯನ್ನು ಬಹು ಜಾಗರೂಕತೆಯಿಂದ ಬಳಸಿಕೊಳ್ಳುತ್ತಿವೆ. ಆದರೆ ಆಲೋಚನೆ ಹಾಗೂ ಬುದ್ಧಿ ಶಕ್ತಿಯನ್ನು ಹೊಂದಿದ ಮನುಷ್ಯ ಈ ಪ್ರಕೃತಿಯ ಸಿಂಹ ಪಾಲನ್ನು ಬಳಸಿಕೊಳ್ಳುತ್ತಿದ್ದರೂ ಆತ ನಿಸರ್ಗಕ್ಕೆ ಪೂರಕವಾಗಿ ಬದುಕದೆ ಮಾರಕವಾದ ಜೀವನ ನಡೆಸುತ್ತಿದ್ದಾನೆ. ನಮ್ಮೊಳಗಿನ ಕೊರತೆಗಳನ್ನೆ ನೆನೆ ನೆನೆದು ಮನಸ್ಸನ್ನು ಘಾಸಿಕೊಳಿಸಿಕೊಳ್ಳುವುದರ ಬದಲು ಇದ್ದುದರ ಕಡೆಗೆ ಲಕ್ಷ್ಯ ವಹಿಸಿ ಅದರ ಮೌಲ್ಯವನ್ನು ಅರಿತು ಬದುಕನ್ನು ರೂಪಿಸಿಕೊಳ್ಳಬೇಕು. ಈ ಬೆಳಕಿನ ಮಾಸ ಕಾರ್ತಿಕ ಮಾಸದ ಈ ಶುಭದಿನದಂದು ಎಲ್ಲರೂ ಅರಿವಿನ ಜೀವನವನ್ನು ನಡೆಸುವ ಸಂಕಲ್ಪವನ್ನು ಮಾಡಬೇಕು ಎಂದರು.
ಸೊರಬ ಟೌನ್ ವೀರಶೈವ ಸಮಾಜ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ದೇವರಿಗೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆಗಳು ನಡೆದವು. ಸಂಜೆ ಕಾರ್ತಿಕೋತ್ಸವದಲ್ಲಿ ಸದ್ಭಕ್ತರು ಪಾಲ್ಗೊಂಡು ದೀಪಾರಾಧನೆಯನ್ನು ಮಾಡಿದರು. ಅಕ್ಕನ ಬಳಗದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸರ್ವ ಭಕ್ತರಿಗೂ ಫಲಹಾರ ವಿತರಿಸಲಾಯಿತು.