ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಪ್ರಗತಿಗೆ ಸಹಕಾರ ನೀಡಬೇಕೆಂದು ಅಂಡಿಗೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಪಿ. ಷಣ್ಮುಖಪ್ಪ ಹೇಳಿದರು.ಶುಕ್ರವಾರ ತಾಲೂಕಿನ ಅಂಡಿಗೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 2019-20ರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಪ್ರಗತಿಯಲ್ಲಿ ಷೇರುದಾರರ ಪಾತ್ರ ಮುಖ್ಯವಾಗಿದ್ದು, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ ಷೇರುದಾರರ ಹಿತಕಾಯಲಾಗುವುದು. ಈ ವರುಷ 1.80 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಸಾನವನ್ನು ಮರುಪಾವತಿ ಮಾಡಿದ್ದಲ್ಲಿ ಆರ್ಥಿಕ ಹೊರೆ ಕಡಿಮೆಯಾಗುವ ಜತೆಗೆ ಹೊಸ ಸಾಲವನ್ನು ಪಡೆಯಲು ಅನುಕೂಲವಾಗುತ್ತದೆ ಎಂದ ಅವರು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಡಲಾಗುವುದು ಎಂದರು.
ಎಂಎಡಿಬಿ ಸದಸ್ಯ ಅಶೋಕ್ ನಾಯ್ಕ್ ಮಾತನಾಡಿ, ಸರಕಾರ ಸಾಲ ಮನ್ನಾಮಾಡಿಯೂ ಕೂಡ ಕೆಲವರ ಸಾಲ ಮನ್ನಾವಾಗಿಲ್ಲ. ಅಂತವರ ಸಾಲದ ಬಡ್ಡಿಯನ್ನು ಸಂಘ ಪಾವತಿ ಮಾಡುತ್ತಿರುವುದರಿಂದ ಸಂಘ ನಷ್ಟದಲ್ಲಿರುವಂತಾಗಿದೆ ಎಂದ ಅವರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಲು ಷೇರುದಾರರು ಮುಂದಾದಾಗ ಸಂಘದ ಏಳಿಗೆ ಸಾಧ್ಯ ಎಂದರು.
ಸಂಘದ ಮುಖ್ಯ ಕಾರ್ಯ ನಿರ್ವಾಹಕ ಬಿ.ಶಿವಾನಂದ ವಾರ್ಷಿಕ ವರದಿ ವಾಚಿಸಿ, ಸಂಘದಲ್ಲಿ 1220 ಜನ ಷೇರುದಾರರು, 329 ಜನ ಠೇವಣಿದಾರರಿದ್ದು, ಒಟ್ಟು 24 ಲಕ್ಷ ಠೇವಣಿ ಹಣ ಇದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ್ ಗೌಡ ಹಿರಿಯಾವಲಿ, ನಿರ್ದೇಶಕರಾದ ಎ.ಬಿ.ಶಾಂತಪ್ಪ, ಅಬ್ದುಲ್ ಜಬ್ಬರ್ ಸಾಬ್, ಎಚ್.ಈರಪ್ಪ, ಆರ್.ರಾಘವೇಂದ್ರ, ಗಣಪತಿ, ವೈ.ಹನುಮಂತಪ್ಪ, ಎಚ್.ಶಿವಪ್ಪ, ಪುಟ್ಟಮ್ಮ, ಕನ್ನಮ್ಮ, ಅಂಜಪ್ಪ, ಮಾಜಿ ಉಪಾಧ್ಯಕ್ಷ ಶೇಖರಯ್ಯ ಮಾಸ್ತರ್, ಸಿಬ್ಬಂದಿ ಡಿ.ವಿನಾಯಕ, ಕುಸುಮಾ ಸೇರಿದಂತೆ ಷೇರುದಾರರು ಪಾಲ್ಗೊಂಡಿದ್ದರು.
previous post
next post