Malenadu Mitra
ರಾಜಕೀಯ ರಾಜ್ಯ

ಹರಕು ಬಾಯಿಗೆ ಬೀಗ, ಗಟ್ಟಿಯಾಯ್ತು ಬಿಎಸ್‍ವೈ ಜಾಗ

ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು ಅವರು ಪಕ್ಷದ ಹರುಕುಬಾಯಿ ನಾಯಕರಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ ನಾಯಕತ್ವದ ವಿರುದ್ಧ ಬಾಯಿಗೆ ಬಂದಂತೆ ಮಾತಾಡುತ್ತಿದ್ದವರಿಗೆ ಮತ್ತು ಮಾತಾಡುವವರ ಹಿಂದಿನ ಪ್ರೇರಣಾ ಶಕ್ತಿಗೆ, ಖಡಕ್ ವಾರ್ನಿಂಗ್ ನೀಡಿದ್ದಾರೆ.


ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಶನಿವಾರ ನಡೆದಿದ್ದು, ಸಂಕ್ರಮಣದ ಬಳಿಕ ಅಧಿಕಾರದ ಪಥ ಬದಲಾಗಲಿದೆ. ಸಿಹಿ ಸುದ್ದಿ ಸಿಗಲಿದೆ ಎಂಬ ಹೇಳಿಕೆ ನೀಡುತ್ತಿರುವವರಿಗೆ ಕಡಕ್ ಸೂಚನೆಯನ್ನೂ ನೀಡಿರುವ ಸಮಿತಿಯು,ಯಾವುದೇ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳಬೇಕು. ಮಾಧ್ಯಮದ ಮುಂದೆ ಮತ್ತು ಸಾರ್ವಜನಿಕವಾಗಿ ಹೇಳಿಕೆ ನೀಡುವುದರಿಂದ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ. ಇನ್ನು ಮುಂದೆ ಈ ರೀತಿ ಉಡಾಳುತನದ ಹೇಳಿಕೆಯನ್ನು ಸಹಿಸಲಾಗದು ಎಂಬ ಕಟುನಿಲುವನ್ನು ತಾಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೆಚ್ಚಿದ ಬಿಎಸ್‍ವೈ ಶಕ್ತಿ:
ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ. ಪುತ್ರ ಮತ್ತು ಆಪ್ತರ ಅತಿಯಾದ ಹಸ್ತಕ್ಷೇಪದಿಂದಾಗಿ ಶಾಸಕರು ಸಿಡಿದೇಳಲಿದ್ದಾರೆ ಎಂಬ ಗುಸುಗುಸುಗಳಿಗೆ ಶಿವಮೊಗ್ಗ ಸಭೆ ಮದ್ದರೆದಿದೆ. ಯಡಿಯೂರಪ್ಪ ಅವರು ಸಿಎಂ ಗಾದಿಯಿಂದ ಇಳಿದೇ ಬಿಡುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದವರಿಗೂ ನಳೀನ್ ಕುಮಾರ್ ಕಟೀಲ್ ಹೇಳಿಕೆ ನಿರಾಸೆಯುಂಟು ಮಾಡಿದೆ. ಈ ಎಲ್ಲ ಬೆಳವಣಿಗೆಯು ಪಕ್ಷ ಮತ್ತು ಸರಕಾರದಲ್ಲಿ ಯಡಿಯೂರಪ್ಪರೇ ಪ್ರಭಾವಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ.

ಯಡಿಯೂರಪ್ಪ ಅವರ ಮೇಲೆ ಆರ್‍ಎಸ್‍ಎಸ್ ವಲಯದಲ್ಲಿ ಭಾರೀ “ಅಸಂತೋಷ’ವಿದೆ, ಅವರಿಗೆ ಕೊಟ್ಟ ಅವಧಿ ಮುಗಿದಿದೆ.ಹೊಸ ನಾಯಕತ್ವಕ್ಕಾಗಿ ಹುಡುಕಾಟ ನಡೆದಿದೆ. ಲಿಂಗಾಯತರು ಮತ್ತು ಉತ್ತರ ಕರ್ನಾಟಕದ ಭಾಗದವರೆ ಆಗಬೇಕೆಂಬ ರಾಜಕೀಯ ತಂತ್ರಗಾರಿಕೆಯನ್ನು ಬಿಜೆಪಿ ಹೈಕಮಾಂಡ್ ಹೊಂದಿದೆ ಎಂದು ಇಷ್ಟು ಬಿತ್ತರವಾಗಿದ್ದ ಪುಂಕಾನುಪುಂಕ ಸುದ್ದಿಗಳು ಸುಳ್ಳು ಎಂಬುದು ಈಗ ದೃಢವಾಗಿದೆ. ನಳೀನ್ ಕುಮಾರ್ ಕಟೀಲ್ ಕೂಡಾ ಪರಿವಾರದ ವ್ಯಕ್ತಿಯೇ ಆಗಿದ್ದರಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸುವ ಪ್ರಮೇಯ ಸಧ್ಯಕ್ಕಿಲ್ಲ ಎಂಬುದು ರುಜುವಾತಾಗಿದೆ.
ಯತ್ನಾಳ್ ಹೇಳಿಕೆಯಿಂದ ಮುಜುಗರ:
ಶಾಸಕರು ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮೊದಲು ಸಂಪುಟ ಸೇರುವ ಆಕಾಂಕ್ಷೆ ಹೊಂದಿದ್ದರು. ಅದಕ್ಕೆ ಪೂರಕವಾದ ಹೇಳಿಕೆಗಳನ್ನೂ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಸಂಕ್ರಮಣದ ನಂತರ ಸಿಹಿ ಸುದ್ದಿ ಎಂದು ಹೇಳಿದ್ದಲ್ಲದೆ, ನಾನೂ ಒಂದು ದಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹೇಳಿಕೆಯನ್ನೂ ತೇಲಿ ಬಿಟ್ಟಿದ್ದಾರೆ. ಈ ಹೇಳಿಕೆಗಳಿಗೆ ಕೌಂಟರ್ ಮಾಡಿದ್ದ ಕೇಂದ್ರ ಮಂತ್ರಿ ಸದಾನಂದ ಗೌಡ ಅವರಿಗೆ ತಿರುಗೇಟು ನೀಡಿದ್ದ ಯತ್ನಾಳ್ ಅವರು, ನಾನು ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿದ್ದೆ, ನನ್ನ ಹಿರಿತನವನ್ನು ಸದಾನಂದ ಗೌಡರು ಅರ್ಥಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದರು.

ಯತ್ನಾಳ್ ಈ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೆ, ಒಳಗೊಳಗೇ ಕುರ್ಚಿಯಾಸೆ ಇಟ್ಟುಕೊಂಡಿದ್ದ ನಾಯಕರುಗಳು ಯಡಿಯೂರಪ್ಪ ಕೆಳಗಿಳಿದರೆ ತಮ್ಮ ರಾಜಕೀಯ ಅಧಿಕಾರದ ಪಥ ಬದಲಾಬಹುದು ಎಂಬ ಭಾವನೆ ಹೊಂದಿದ್ದರು. ಆದರೆ ಶಿವಮೊಗ್ಗದಲ್ಲಿ ಯಡಿಯೂಪ್ಪರದೇ ಕೋಟೆಯೊಳಗೆ ಇರುವ ಪ್ರೇರಣಾ ಸಭಾಂಗಣದಲ್ಲಿ ನಡೆದ ಈ ವಿಶೇಷ ಸಭೆ ಬೇರೆಯದೇ ಸಂದೇಶ ನೀಡಿದೆ, ಸರಕಾರದ ಉಳಿದ ಅವಧಿಯಲ್ಲಿ ನಾನೇ ಸಿಎಂ ಎಂಬ ಸಂದೇಶವನ್ನು ವಿರೋಧಿಗಳಿಗೆ ನೀಡುವ ಮೂಲಕ ಯಡಿಯೂರಪ್ಪ ತಾವಿನ್ನೂ ಪಕ್ಷದಲ್ಲಿ ಬಲಿಷ್ಠ ಎಂಬುದನ್ನು ಸಾರಿದ್ದಾರೆ.

Ad Widget

Related posts

ಕುವೆಂಪು ಅವರಿಗೆ ಅವಮಾನ ಖಂಡಿಸಿ ಪ್ರತಿಭಟನೆ ಚಕ್ರತೀರ್ಥ ವಜಾ ಮಾಡಿ,ಶಿಕ್ಷಣ ಸಚಿವರೆ ರಾಜೀನಾಮೆ ನೀಡಿ ಎಂದ ಪ್ರತಿಭಟನಾಕಾರರು

Malenadu Mirror Desk

ಕವಲೇದುರ್ಗಶ್ರೀ ಕೋವಿಡ್‌ಗೆ ಬಲಿ

Malenadu Mirror Desk

ಭದ್ರಾವತಿಯಲ್ಲಿ ಬಿಜೆಪಿ ಮತಪ್ರಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.