ಪುರೋಹಿತಶಾಹಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳಿಂದ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಂಡರಿಗೆ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸೊರಬದಲ್ಲಿ ಸುದ್ದಿಲೋಕ ಪತ್ರಿಕಾ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚಿಂತನ ಮಂಥನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪ್ರದಾಯವಾದಿಗಳು ಧರ್ಮಕೇಂದ್ರಿತ ವಿಚಾರಗಳನ್ನು ಮುನ್ನೆಲೆಗೆ ತಂದು ಯುವಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದರಿಂದ ದಾರ್ಶನಿಕರ ವಿಚಾರಗಳು ಗೌಣವಾಗುತ್ತಿವೆ. ಮನುಷ್ಯನಿಗೆ ಧರ್ಮಶ್ರದ್ಧೆಗಿಂತ ಮೂಲಭೂತವಾಗಿ ಅನ್ನ, ಅರಿವೆ ಹಾಗೂ ಸೂರಿನ ಅವಶ್ಯಕತೆ ಎನ್ನುವುದನ್ನು ಆಳುವ ಸರ್ಕಾರಗಳು ಅರಿಯಬೇಕು ಎಂದು ಸಲಹೆ ನೀಡಿದರು.
೧೨ನೇ ಶತಮಾನದಲ್ಲಿಯೇ ಪುರುಷ ಪ್ರಧಾನ ವ್ಯವಸ್ಥೆಯನ್ನು ಮುರಿಯುವ ಪ್ರಯತ್ನದಲ್ಲಿ ಅಕ್ಕಮಹಾದೇವಿ ಯಶಸ್ಸು ಕಂಡಿದ್ದಾಳೆ. ಮಹಿಳೆಯನ್ನು ಎರಡನೇ ದರ್ಜೆಯ ವ್ಯಕ್ತಿಯನ್ನಾಗಿ ನೋಡುವ ಮನಸ್ಥಿತಿಯ ಹಿಂದೆ ಮನುವಾದ ರಾರಾಜಿಸುತ್ತಿರುವುದು ಕಂಡು ಬರುತ್ತಿದೆ. ಜೋತಿಷ್ಯ, ಪಂಚಾಂಗದಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಬದಲಾಗಿ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎನ್ನುವುದು ಯುವ ಜನತೆಗೆ ಗೊತ್ತುಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮಾಜಿ ಶಾಸಕ ಮಧು ಬಂಗಾರಪ್ಪ, ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಹೋರಾಟಗಾರ ಕೆ.ಮಂಜುನಾಥ್ ಹಳೇಸೊರಬ, ಪ್ರಗತಿಪರ ಕೃಷಿಕ ಹೇಮಚಂದ್ರ, ಸಾಹಿತಿ ರೇವಣಪ್ಪ ಬಿದರಗೇರಿ, ಆರೋಗ್ಯ ಇಲಾಖೆಯ ಶಿಲ್ಪಾ ಕಾನಡೆ, ನಾಟಕ ಅಕಾಡಿಮೆ ಪುರಸ್ಕೃತ ನಾಗರಾಜಗೌಡ ಆಲಹಳ್ಳಿ, ಹಿರಿಯ ಪತ್ರಿಕಾ ವಿತರಕ ರಘುನಾಥ್ ಬಾಪಟ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಜಿ.ಎಂ.ತೋಟಪ್ಪ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ತಾರಾ, ವಿರೇಶ್ ಕೊಟಗಿ, ಶಿವಲಿಂಗಗೌಡ, ರಾಜೇಶ್ವರಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಎಂ.ಕೆ.ಮೋಹನ್, ಪ್ರವೀಣ ಹಿರೇಇಡಗೋಡು, ಡಾ.ಷಣ್ಮುಖಪ್ಪ ಚಂದ್ರಪ್ಪ ಮೇಷ್ಟ್ರು ಇದ್ದರು
ಗುರುಮೂರ್ತಿ ಪ್ರಾರ್ಥಿಸಿ, ರವಿ ಕಲ್ಲಂಬಿ ಸ್ವಾಗತಿಸಿ, ನೋಪಿಶಂಕರ್ ವಂದಿಸಿ, ರಾಘವೇಂದ ಟ್ರಿ. ನಿರೂಪಿಸಿದರು.