Malenadu Mitra
ರಾಜ್ಯ ಶಿವಮೊಗ್ಗ

ನಿರಂತರ ಜ್ಯೋತಿಯಲ್ಲಿ ಗೋಲ್ ಮಾಲ್

ಶಿವಮೊಗ್ಗದ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಟಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಟಾನ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ 68ಫೀಡರ್‍ಗಳ ಬಲವರ್ಧನೆಗೆ ಮಂಜೂರಾತಿ ದೊರೆತು ಕಾಮಗಾರಿ ಪ್ರಗತಿಯಲ್ಲಿದೆ. ಇದುವರೆಗೆ ಶಿವಮೊಗ್ಗ ವಿಭಾಗದಲ್ಲಿ 17ಫೀಡರ್‍ಗಳ ಪೈಕಿ 10, ಭದ್ರಾವತಿಯಲ್ಲಿ 18ಫೀಡರ್‍ಗಳ ಪೈಕಿ 14, ಸಾಗರದಲ್ಲಿ 9ಫೀಡರ್‍ಗಳ ಪೈಕಿ 5 ಮತ್ತು ಶಿಕಾರಿಪುರದಲ್ಲಿ 24 ಫೀಡರ್‍ಗಳ ಪೈಕಿ 23ಕಾಮಗಾರಿಗಳು ಪೂರ್ಣಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಶಿವಮೊಗ್ಗದಲ್ಲಿ ಬಾಕಿ ಉಳಿದಿರುವ 7ಕಾಮಗಾರಿಗಳ ಪೈಕಿ 4ಕಾಮಗಾರಿ ಈ ತಿಂಗಳ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿದೆ. ಒಟ್ಟು ಯೋಜನೆಯ ವೆಚ್ಚ 226ಕೋಟಿ ರೂ. ಪೈಕಿ 148ಕೋಟಿ ರೂ. ಪಾವತಿ ಮಾಡಲಾಗಿದೆ ಎಂದು ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ವೀರೇಂದ್ರ ಅವರು ಮಾಹಿತಿ ನೀಡಿದರು.

ಕಾಮಗಾರಿ ಅನುಷ್ಟಾನದ ಬಗ್ಗೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಫೀಡರ್‍ಗಳಲ್ಲಿ ಅಳವಡಿಸಿರುವ ಕಂಬಗಳ ಬಗ್ಗೆ ಸರಿಯಾಗಿ ಲೆಕ್ಕ ಇರುವುದಿಲ್ಲ. ಪ್ರತಿ ಕಂಬಗಳಿಗೂ ಸಂಖ್ಯೆಯನ್ನು ನಮೂದಿಸಬೇಕು. ಅಧಿಕಾರಿಗಳು ಎಲ್ಲಾ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಬೇಕು. ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಸರಿಯಾದ ವೇತನ ಮತ್ತು ಭವಿಷ್ಯ ನಿಧಿ ಸೌಲಭ್ಯ ನೀಡದಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಪರಿಶೀಲಿಸಿ ಎಲ್ಲಾ ಕಾರ್ಮಿಕರಿಗೆ ಸರಿಯಾಗಿ ವೇತನ ಮತ್ತಿತರ ಸೌಲಭ್ಯ ಒದಗಿಸಬೇಕು. ಗುತ್ತಿಗೆದಾರನ ಯಾವುದೇ ಬಿಲ್ಲುಗಳನ್ನು ಅನುಮೋದಿಸುವುದನ್ನು ತಡೆಹಿಡಿಯಬೇಕು. ಮಾರ್ಗಸೂಚಿಯನ್ನು ಉಲ್ಲಂಘಿಸಿ ಕಾಮಗಾರಿ ಅನುಷ್ಟಾನಗೊಳಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಚಿವರು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರಂತರ ಜ್ಯೋತಿ ಯೋಜನೆ ಅನುಷ್ಟಾನ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಭೆ

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಅಳವಡಿಸುವ ವಿದ್ಯುತ್ ಕಂಬಗಳು ಮಾತ್ರವಲ್ಲದೆ ಟ್ರಾನ್ಸ್‍ಫಾರ್ಮರ್‍ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು. ವಿದ್ಯುತ್ ಅಘಾತದಿಂದ ಸಾವಿಗೀಡಾಗುವವರಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಮಾರ್ಗಸೂಚಿ ಪ್ರಕಾರ ಪ್ರಧಾನ ಮಂತ್ರಿ ಅವರು ಭಾವಚಿತ್ರವನ್ನು ಜಾಹೀರಾತಿನಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಿಳಿಸಿದರು.

ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Ad Widget

Related posts

ಹೃದಯ ಜಾಗೃತಿಗಾಗಿ ವಾಕಥಾನ್

Malenadu Mirror Desk

ಉತ್ತಮ ಕೆಲಸಕ್ಕೆ ಮಾಧ್ಯಮಗಳಿಂದ ಸಹಕಾರ: ಲಕ್ಷ್ಮೀಪ್ರಸಾದ್
ಪ್ರೆಸ್ ಟ್ರಸ್ಟ್,ಪತ್ರಕರ್ತರ ಸಂಘದ ಚಹಾಕೂಟದಲ್ಲಿ ನಿರ್ಗಮಿತ ಎಸ್ಪಿ ಅಭಿಮತ

Malenadu Mirror Desk

ಪುರದಾಳು ಪಂಚಾಯಿತಿಯಲ್ಲಿ ಗುರುವಂದನೆ ಕಾರ್ಯಕ್ರಮ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.