Malenadu Mitra
ರಾಜಕೀಯರಾಜ್ಯ

ಮಧು ಬಂಗಾರಪ್ಪ ಹೆಸರು ಕೈಬಿಟ್ಟಿದ್ದೇಕೆ ಗೊತ್ತಾ ?

ಬಿಜೆಪಿಯ ಬಿ.ಟೀಂ ಎಂಬ ಅಪಖ್ಯಾತಿ ಕಳೆದುಕೊಳ್ಳಲು ಯತ್ನಿಸುತ್ತಿರುವ ಜೆಡಿಎಸ್ ಐಕಾನ್ ಎಚ್.ಡಿ.ಕುಮಾರಸ್ವಾಮಿ ಅವರು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಸೋಮವಾರ ಪಕ್ಷದ ವಿಭಾಗವಾರು ಸಂಘಟನಾ ವೀಕ್ಷಕರನ್ನು ನೇಮಕ ಮಾಡಿರುವ ಅವರ ಪಟ್ಟಿಯಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ ಹೆಸರು ಮಾಯವಾಗಿದೆ.
ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯವನ್ನು ಪಕ್ಷದ ಸಂಘಟನೆಯ ದೃಷ್ಟಿಯಿಂದ ೮ ವಿಭಾಗಗಳನ್ನಾಗಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಬೆಳಗಾವಿ ವಿಭಾಗಕ್ಕೆ ಕುಮಾರಸ್ವಾಮಿ ಅವರ ನೇತೃತ್ವದ ವೀಕ್ಷಕರ ತಂಡ ರಚನೆಯಾಗಿದೆ. ಮೈಸೂರು ವಿಭಾಗಕ್ಕೆ ಎಚ್.ಡಿ.ರೇವಣ್ಣ ಮುಖಂಡತ್ವದ ತಂಡವನ್ನು ನೇಮಕ ಮಾಡಲಾಗಿದೆ.
ಶಿವಮೊಗ್ಗ ,ದಾವಣಗೆರೆ, ಚಿತ್ರದುರ್ಗ,ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡ ವಿಭಾಗಕ್ಕೆ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಶಿವಶಂಕರ್, ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ ಮತ್ತಿತರ ನಾಯಕರ ವೀಕ್ಷಕರ ತಂಡ ರಚನೆ ಮಾಡಲಾಗಿದೆ.
ಮಧು ಹೆಸರೇಕೆ ಮಾಯವಾಯ್ತು?
ಮಾಜಿ ಶಾಸಕ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಹೆಸರು ಜೆಡಿಎಸ್‌ನ ವೀಕ್ಷಕರ ತಂಡದಲ್ಲಿ ಇಲ್ಲ. ಈಗಾಗಲೇ ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟಿರುವ ಮಧುಬಂಗಾರಪ್ಪ ಅವರನ್ನು ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿಯೇ ವೀಕ್ಷಕರ ಪಟ್ಟಿಯಲ್ಲಿ ಸೇರಿಸಿಲ್ಲ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಇರುವಾಗಲೇ ಸೂಕ್ತ ಸ್ಥಾನಮಾನ ಕೊಡದ ಕಾರಣ ಮಧು ಬಂಗಾರಪ್ಪ ಅವರು ಎಚ್‌ಡಿಕೆ.ಜತೆ ಮುನಿಸಿಕೊಂಡಿದ್ದರು. ಸತತ ಮೂರು ಚುನಾವಣೆ ಎದುರಿಸಿ ಹ್ಯಾಟ್ರಿಕ್ ಸೋಲು ಕಂಡಿದ್ದ ಮಧು ಅವರಿಗೆ ಅಧಿಕಾರ ಕೊಡುವ ಎಲ್ಲ ಅವಕಾಶ ಇದ್ದರೂ ಕುಮಾರಸ್ವಾಮಿ ಅವರು ಮನಸು ಮಾಡಿರಲಿಲ್ಲ. ಈ ಕಾರಣದಿಂದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಜತೆ ಹೆಜ್ಜೆಹಾಕಲು ಅಣಿಯಾಗಿದ್ದಾರೆ. ಈ ಕಾರಣದಿಂದ ವೀಕ್ಷಕರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.

ಪಂಚಾಯಿತಿ ಕದನದಲ್ಲಿ ಕಾಂಗ್ರೆಸ್ ಜತೆ ಸಾಥ್:
ಇತ್ತಿಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರದೇ ಇದ್ದರೂ, ಪಕ್ಷ ಬೆಂಬಲಿತ ಕಾರ್ಯಕರ್ತರನ್ನು ಎಲ್ಲ ಪಕ್ಷಗಳೂ ಗೆಲ್ಲಿಸಿಕೊಂಡಿವೆ. ಆದರೆ ಸೊರಬ ಕ್ಷೇತ್ರದಲ್ಲಿ ಮಧುಬಂಗಾರಪ್ಪ ಅವರು, ಜೆಡಿಎಸ್ ಹೆಸರು ಬಳಸದೆ ತಮ್ಮ ವೈಯಕ್ತಿಕ ನೆಲೆಯಲ್ಲಿಯೇ ಚುನಾವಣೆ ನಡೆಸಿದ್ದಾರೆ. ಅದೂ ಅಲ್ಲದೆ ಕಾಂಗ್ರೆಸ್ ನಾಯಕರ ದಂಡಿನೊಂದಿಗೆ ಬಿಜೆಪಿ ಎದುರಿಸಿ ಚುನಾವಣೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ತಮ್ಮ ಬೆಂಬಿಲಿತ ಸದಸ್ಯರುಗಳು ೧೭ ಪಂಚಾಯಿತಿಗಳಲ್ಲಿ ಗೆದ್ದಿದ್ದಾರೆ ಎಂದು ಘೋಷಿಸಿದ್ದಾರೆ. ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸುವಾಗ ಕಾಂಗ್ರೆಸ್ ನಾಯಕರನ್ನೂ ಜತೆಗಿಟ್ಟುಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಕುಮಾರಸ್ವಾಮಿ ಅವರು ಸಹಜವಾಗಿಯೇ ಮಧು ಬಂಗಾರಪ್ಪ ಹೆಸರನ್ನು ವೀಕ್ಷಕರ ಪಟ್ಟಿಯಿಂದ ಕೈಬಿಟ್ಟಿದ್ದಾರೆ.
ಶೀಘ್ರ ಕಾಂಗ್ರೆಸ್ ಸೇರ್ಪಡೆ:
ಜೆಡಿಎಸ್‌ನ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಧುಬಂಗಾರಪ್ಪ ಅವರು, ನಾನಿನ್ನೂ ಜೆಡಿಎಸ್‌ನಲ್ಲೇ ಇದ್ದೇನೆ. ಇಲ್ಲಿ ಅಸಮಾಧಾನ ಇದೆ ಎಂಬುದನ್ನು ಮೊದಲಿಂದಲೂ ಹೇಳಿದ್ದೇನೆ. ಇದರಲ್ಲಿ ಮುಚ್ಚುಮೊರೆ ಎಂತದೂ ಇಲ್ಲ. ಆದಷ್ಟು ಶೀಘ್ರ ಕಾಂಗ್ರೆಸ್ ಸೇರ್ಪಡೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವುದಕ್ಕೂ ಈಗ ಆತುರ ಇಲ್ಲ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Ad Widget

Related posts

ಸ್ಥಳೀಯ ಸಂಸ್ಥೆ ಬಲವರ್ಧನೆ ನನ್ನ ಆದ್ಯತೆ : ಡಿ.ಎಸ್.ಅರುಣ್

Malenadu Mirror Desk

160 ಕೋಟಿ ವೆಚ್ಚದಲ್ಲಿ ಸರ್ವಋತು ಜೋಗ ಜಲಪಾತ

Malenadu Mirror Desk

ಪ್ರಕಾಶ್ ಎಂಬ ಮಲೆನಾಡಿನ ಸಾರಥಿ ,ಮಲೆನಾಡಿನ ನೂರಾರು ಕುಟುಂಬಗಳಲ್ಲಿ ದೀಪ ಬೆಳಗಿಸಿದ್ದ ಪ್ರಕಾಶ್ ಟ್ರಾವೆಲ್ಸ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.