Malenadu Mitra
ರಾಜ್ಯಶಿವಮೊಗ್ಗಸಾಗರಸೊರಬ

ನಾರಾಯಣ ಗುರುಗಳ ಹೆಸರಿನಲ್ಲಿ ಸಮಾಜ ಒಂದಾಗಬೇಕಿದೆ: ಮಧು ಬಂಗಾರಪ್ಪ ಆಶಯ

26 ಉಪಜಾತಿಗಳನ್ನೊಳಗೊಂಡ ರಾಜ್ಯಮಟ್ಟದ ಶ್ರೀ ನಾರಾಯಣ ಗುರು ಮಹಾ ಒಕ್ಕೂಟ ಅಸ್ತಿತ್ವಕ್ಕೆ

ಬೆಂಗಳೂರು : ಸಮಾಜದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಾವೆಲ್ಲರೂ ಒಂದಾಗಿ ಸಂಘಟಿತರಾದಾಗ ಮಾತ್ರ ಸಮಾಜಕ್ಕೆ ನಿಜವಾದ ಶಕ್ತಿ ಬರಲು ಸಾಧ್ಯ. ಈ ಆಶಯವನ್ನು ದಶಕದ ಹಿಂದೆಯೇ ವ್ಯಕ್ತಪಡಿಸುತ್ತಾ ಬಂದಿದ್ದೆ. ಇಂದು ಅದು ಸಾಕಾರಗೊಂಡಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ ಒಟ್ಟು 26 ಉಪಜಾತಿಗಳನ್ನು ಒಳಗೊಂಡ ರಾಜ್ಯಮಟ್ಟದ ಶ್ರೀ ನಾರಾಯಣ ಗುರು ಮಹಾ ಒಕ್ಕೂಟ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಕೇರಳದ ಶ್ರೀ ನಾರಾಯಣ ಗುರು ಧರ್ಮ ಸಂಘಂ ಮಠದ ಪೀಠಾಧಿಪತಿ ಶ್ರೀ ಸ್ವಾಮಿ ಋತುಂಬರಾನಂದ ಸ್ವಾಮೀಜಿ ಅವರು ಮಹಾ ಒಕ್ಕೂಟವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.

ಶ್ರೀ ನಾರಾಯಣ ಗುರು ಮಹಾಒಕ್ಕೂಟದ ಅಧ್ಯಕ್ಷರಾದ ಜಿ.ಪಿ. ಸುಧಾಕರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಂಘಟನೆ ನೂರಾರು ವರ್ಷಗಳ ಕಾಲ ಬಾಳುವ ಮೂಲಕ ಸಮಾಜಕ್ಕೆ ಶಕ್ತಿ ತುಂಬಲಿ. ನಾವೆಲ್ಲರೂ ಬೇರೆ ಬೇರೆ ವೇದಿಕೆಗಳಲ್ಲಿ, ಬೇರೆ ಬೇರೆ ಜವಾಬ್ದಾರಿಗಳಲ್ಲಿದ್ದರೂ ಈ ಸಂಘಟನೆಯೊಂದಿಗೆ ಸದಾ ಇರುತ್ತೇವೆ. ವೇದಿಕೆಯಲ್ಲಿರುವ ಪೂಜ್ಯ ಸ್ವಾಮೀಜಿಗಳಲ್ಲಿ ನನ್ನದೊಂದು ಮನವಿ. ದಯವಿಟ್ಟು ಸಮಾಜದ ಪರವಾಗಿ ಧ್ವನಿ ಎತ್ತಿ, ಸಮಾಜದ ಹಿತಾಸಕ್ತಿಗಾಗಿ ಕೆಲಸ ಮಾಡಿ ಎಂದು ವಿನಂತಿಸಿದರು.

ನಾವು ಸಮಾಜಕ್ಕಾಗಿ ಎಷ್ಟೇ ಉತ್ತಮ ಕೆಲಸಗಳನ್ನು ಮಾಡಿದರೂ ಕೆಲವೊಮ್ಮೆ ಅವುಗಳನ್ನು ಸಮುದಾಯ ಮರೆತುಬಿಡುತ್ತದೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೆ. ಪಠ್ಯಪುಸ್ತಕಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳನ್ನು ಸೇರ್ಪಡೆಗೊಳಿಸುವುದು, ನಾರಾಯಣ ಗುರುಗಳ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ನಿಗಮ-ಮಂಡಳಿ ರಚಿಸುವುದು ಈ ಮೂರು ಬೇಡಿಕೆಗಳಾಗಿದ್ದವು. ಮುಖ್ಯಮಂತ್ರಿಗಳು ಕೂಡಲೇ ಸಮ್ಮತಿಸಿ ಅವುಗಳಿಗೆ ಅನುಮೋದನೆ ನೀಡಿದ್ದರು ಎಂದು ಹಿಂದಿನ ಪ್ರಯತ್ನಗಳನ್ನು ಸ್ಮರಿಸಿದರು.

ಸಮಾಜದ ರಾಜಕೀಯ ಅಸ್ತಿತ್ವಕ್ಕೆ ಒಗ್ಗಟ್ಟು ಅಗತ್ಯ

26 ಉಪಪಂಗಡಗಳು ಹರಿದು ಹಂಚಿಹೋಗದೆ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಮಾಜದ ಅಭಿವೃದ್ಧಿ ಮತ್ತು ರಾಜಕೀಯ ಅಸ್ತಿತ್ವವನ್ನು ಬಲಪಡಿಸುವ ದೃಷ್ಟಿಯಿಂದ ಸಂಘಟಿತ ಪ್ರಯತ್ನ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಮಹಾಒಕ್ಕೂಟ ಅಸ್ತಿತ್ವಕ್ಕೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕಮಗಳೂರಿನ ದತ್ತಾಶ್ರಮದ ಶ್ರೀ ವಿನಯ್ ಗುರೂಜಿ, ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಪೀಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ, ವರ್ತೂರಿನ ಶ್ರೀ ಸ್ವಾಮಿ ದೇವಿಕಾನಂದ, ಅಫಜಲಪುರದ ಶ್ರೀ ಶಂಕರಪ್ಪ ಸ್ವಾಮೀಜಿ, ಸೈದಾಪುರದ ಶ್ರೀ ಭೀಮಾಶಂಕರ ಶರಣ ಸ್ವಾಮೀಜಿ ಹಾಗೂ ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಎಸ್. ರಾಮಪ್ಪ ಉಪಸ್ಥಿತರಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ, ವಿ. ಸುನಿಲ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಜಗದೇವ ಗುತ್ತೇದಾರ್ ಸೇರಿದಂತೆ ಸಮುದಾಯದ ಮಾಜಿ ಸಚಿವರು, ಶಾಸಕರು ಹಾಗೂ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಿಂದ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್‌, ಪ್ರಮುಖರಾದ ಕಲಗೋಡು ರತ್ನಾಕರ್‌, ಬಂಡಿ ರಾಮಚಂದ್ರ, ಮುಡುಬ ರಾಘವೇಂದ್ರ, ಈಡಿಗ ಸಂಘದ ಕೆಲವು ಪದಾಧಿಕಾರಿಗಳು, ೨೬ ಪಂಗಡಗಳ ಪ್ರಮುಖರು ಭಾಗವಹಿಸಿದ್ದರು.

Ad Widget

Related posts

ಈ ಬಾರಿ ಕಿಮ್ಮನೆ, ಬೇರೆಲ್ಲ ಸುಮ್ಮನೆ ಎಂದ ಮಂಜುನಾಥ್‌ಗೌಡ     19ಕ್ಕೆ ನಾಮಪತ್ರ  ಉಭಯ ನಾಯಕರಿಂದಜಂಟಿ ಪತ್ರಿಕಾಗೋಷ್ಠಿ

Malenadu Mirror Desk

ಸದನದಲ್ಲಿ ನಿಮ್ಹಾನ್ಸ್ ಅವ್ಯವಸ್ಥೆ ಬಿಚ್ಚಿಟ್ಟ ಶಾಸಕ; ನಾನು ನನ್ನ ಇಬ್ಬರು ಸಂಬಂಧಿಗಳನ್ನು ಕಳೆದುಕೊಂಡಿದ್ದೇನೆ:ಹಾಲಪ್ಪ

Malenadu Mirror Desk

ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ಆರಂಭ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.