ಸೊರಬ: ಪ್ರಸ್ತುತ ಸರ್ಕಾರದಲ್ಲಿ ಕೇಳಿ ಬರುತ್ತಿರುವ ಸ್ಟಿಂಗ್ ಆಪರೇಷನ್ ಗುಮ್ಮದ ಪಿತಾಮಹ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಆಗಿದ್ದು, ರಾಜಕೀಯ ಇತಿಹಾಸದಲ್ಲಿ ನನ್ನ ಮೇಲೆ ಮೊದಲ ಪ್ರಯೋಗ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು. ಸೋಮವಾರ ತಾಲ್ಲೂಕಿನ ಕಮನವಳ್ಳಿ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಮುಖಂಡರ ಪಕ್ಷ ಸೇರ್ಪಡೆ ಹಾಗೂ ಸಂಘಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ನಾನು ಸಚಿವನಾಗಿದ್ದಾಗ ನನ್ನ ಮೇಲೆ ದೂರು ನೀಡಿದ ವ್ಯಕ್ತಿಗೆ ೧೯೨ ಬಾರಿ ದೂರವಾಣಿ ಕರೆ ಮಾಡಿದ್ದಾರೆ. ಬಂಗಾರಪ್ಪ ಅವರಂತಹ ನಾಯಕನನ್ನು ಈ ವಿಷಯದಲ್ಲಿ ಬಳಸಿಕೊಂಡಿದ್ದಾರೆ ಎಂದು ದೂರಿದರು. ತಾಲ್ಲೂಕಿನಲ್ಲಿ ೬೦ ವರ್ಷಗಳಿಂದ ಒಂದೇ ಕುಟುಂಬದ ಆಳ್ವಿಕೆಯಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಈಗ ಅಹಂಕಾರ, ಠೀಂಕಾರದಿಂದ ಗರ್ಜಿಸುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿದ್ಯೆ ಕಲಿಸುವರು ಯಾರು? ತಾಲ್ಲೂಕಿನ ಅಭಿವೃದ್ಧಿ ಮಾಡುವಲ್ಲಿ ನಿಮ್ಮ ಅಹಂಕಾರ, ಠೇಂಕಾರ ತೋರಿಸಿ ಎಂದು ಸವಾಲು ಹಾಕಿದರು. ಸ್ವಾತಂತ್ರ್ಯ ನಂತರವೂ ಜಮೀನು,ವಸತಿ,ವಿದ್ಯೆ ಇಲ್ಲದೇ ಅರೆ ಹೊಟ್ಟೆಯಲ್ಲಿ ಬದುಕುತ್ತಿದ್ದ ದೇಶದ ದಲಿತರು, ಹಿಂದುಳಿದ ಸಮುದಾಯಗಳಿಗೆ ಧ್ವನಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಮೂಲಕ ೨೦೪೦ರ ಹೊತ್ತಿಗೆ ಹಸಿವು ಮುಕ್ತ ಹಾಗೂ ಶೋಷಣೆ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ ಎಂದರು.
ಜಗತ್ತಿನಲ್ಲಿ ೧೪ಕೋಟಿ ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಬಹುದೊಡ್ಡ ರಾಜಕೀಯ ಪಕ್ಷವಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಪಕ್ಷದಲ್ಲಿ ಸಿದ್ಧಾಂತ ಒಪ್ಪಿ ಬರುವ ಪ್ರತಿಯೊಬ್ಬರಿಗೂ ಸ್ವಾಗತವಿದೆ. ಎಣ್ಣೇಕೊಪ್ಪ ಮಲ್ಲಿಕಾರ್ಜುನಗೌಡ ದಾನ,ಧರ್ಮ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ ಪಜ್ಞೆವಿರುವ ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದಿದೆ ಎನ್ನುವುದು ಬೇಸರದ ಸಂಗತಿ. ಕ್ಷೇತ್ರದಲ್ಲಿ ಹುಟ್ಟಿ ಬೆಳೆದ ಐದು ಜನ ಬೇರೆ ಬೇರೆ ಕ್ಷೇತ್ರದಲ್ಲಿ ಶಾಸಕರಾಗಿದ್ದೇವೆ. ಹೀಗೆ ರಾಜಕೀಯ ಪ್ರಜ್ಞೆ ಇದ್ದು ಬೇರೆ ಬೇರೆ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾದರೂ ಇಲ್ಲಿ ಶಾಸಕರಾದವರಿಂದ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಒಬ್ಬ ಜನಪ್ರತಿನಿಧಿ ಅಧಿಕಾರದ ಮದದಿಂದ ಮುಖಂಡರನ್ನು ನೋಡಿದಾಗ ಸ್ವಾಭಿಮಾನವಿರುವ ಯಾವುದೇ ವ್ತಕ್ತಿ ಅವರ ಜೊತೆಗೆ ಇರುವುದಿಲ್ಲ. ರುದ್ರಪ್ಪ ಕಡ್ಲೇರ್ ಅವರು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರಿದ್ದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರವೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ,,ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್,ಮಾಜಿ ಸಚಿವ ಬಿ.ಸಿ.ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಗಹಳ್ಳಿ, ಹರಿಕೃಷ್ಣ, ಮಾಲತೇಶ್, ಡಾ.ಜ್ಞಾನೇಶ್, ಕಮನವಳ್ಳಿ ಮಂಜಣ್ಣ, ಟಿ.ಡಿ.ಮೇಘರಾಜ್, ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್,ಹನುಮಂತಪ್ಪ, ನಾಗರಾಜಗೌಡ, ಹನುಮಂತಪ್ಪ, ನೀಲಪ್ಪ ಇದ್ದರು.
೪೦ ವರ್ಷದ ರಾಜಕಾರಣದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಬಂಗಾರಪ್ಪನವರ ಹೆಸರಿನಲ್ಲಿ ಗೆದ್ದು ಬಂದವರಿಗೆ ತಾಲ್ಲೂಕಿನ ಅಭಿವೃದ್ಧಿ ಬೇಕಾಗಿಲ್ಲ. ಸಚಿವರು ತಮಗೆ ಮತ ನೀಡಿ ಗೆಲ್ಲಿಸಿದ ಗ್ರಾಮಗಳಿಗೆ ಇಂದಿಗೂ ಭೇಟಿ ಕೊಟ್ಟಿಲ್ಲ. ಅವರ ವರ್ತನೆ ನೋಡಿ ಬೇಸತ್ತು ನೂರಾರು ಮುಖಂಡರು ಬಿಜೆಪಿ ಸೇರಿದ್ದೇವೆ.
ರುದ್ರಪ್ಪ ಕಡ್ಲೇರ್, ತಾಲ್ಲೂಕು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ
ಈ ಬಾರಿ ಸೊರಬ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಶಾಸಕರಾಗಿ ಆಯ್ಕೆ ಮಾಡಲು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕಿದೆ. ಕೇಂದ್ರ ಸರಕಾರ ಅಭಿವೃದ್ಧಿಪರ ಆಳಿತಕ್ಕೆ ಜನರಿಂದ ದೊರೆಯುತ್ತಿರುವ ಬೆಂಬಲ ಹಾಗೂ ರಾಜ್ಯ ಸರಕಾರದ ದುರಾಡಳಿತವು ಬಿಜೆಪಿ ಸಂಘಟನಾ ಶಕ್ತಿಯನ್ನು ಬಲಪಡಿಸುತ್ತಿದೆ.