ಸೊರಬ : ಸಾರ್ವಜನಿಕರ ಕುಂದು-ಕೊರತೆಗಳು ಮತ್ತು ಅವರ ದುಃಖ ದುಮ್ಮಾನ ಗಳನ್ನು ಆಲಿಸಿ, ಅವುಗಳಿಗೆ ಉಪಸ್ಥಿತ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿಯೇ ಸೂಕ್ತ ಹಾಗೂ ಸಮಾಧಾನದ ಪರಿಹಾರ ನೀಡುವ ಸಲುವಾಗಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸೊರಬದ ರಂಗಮಂದಿರದಲ್ಲಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜನರಿರುವಲ್ಲಿಗೆ ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಮತ್ತು ಸಚಿವರು ತೆರಳಿ ಜನರ ಸಮಸ್ಯೆಗೆ ಸ್ಪಂದಿಸುವ ಮಾನ್ಯ ಮುಖ್ಯ ಮಂತ್ರಿಗಳ ಆಶಯದ ಮಹತ್ವದ ಕಾರ್ಯಕ್ರಮ ಇದಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅನಗತ್ಯವಾಗಿ ಅಲೆಯುವುದು ತಪ್ಪಲಿದೆ ಮಾತ್ರವಲ್ಲ ಅವರ ಶ್ರಮದ ಹಣ ಮತ್ತು ಸಮಯ ಉಳಿತಾಯವಾಗುವುದರ ಜೊತೆಗೆ ಸಮಸ್ಯೆಗೆ ಸಕಾಲಿಕ ಪರಿಹಾರ ದೊರೆತು ನೆಮ್ಮದಿಯ ಬದುಕು ಸೃಷ್ಟಿಯಾಗಲಿದೆ. ಇದು ಸರ್ಕಾರದ ಉದ್ದೇಶವೂ ಆಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸಂಪರ್ಕ ಹಾಗೂ ಸಹಭಾಗಿತ್ವವನ್ನು ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕ ಸೇವೆಗಳ ಗುಣಮಟ್ಟ ಸುಧಾರಣೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಸಹಭಾಗಿತ್ವಕ್ಕೆ ಉತ್ತೇಜನ ದೊರೆಯುತ್ತದೆ . ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಆಂದೋಲನ ಸಭೆ ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಕಾರ್ಯಕ್ರಮಗಳು ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ ಮತ್ತು ಆಡಳಿತಾತ್ಮಕ ವಿಳಂಬಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಜೊತೆಗೆ, ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತವೆ ಎಂದ ಅವರು “ಜನರಿಗಾಗಿ ಆಡಳಿತ, ಜನರೊಂದಿಗೆ ಆಡಳಿತ” ಎಂಬ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುವಲ್ಲಿ ಪ್ರಜಾಸೇವಾ ಆಂದೋಲನ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಸಭೆಯಲ್ಲಿ ಪ್ರಮುಖವಾಗಿ ರಸ್ತೆ ಅಭಿವೃದ್ಧಿ, ಸ್ಕಾಲರ್ ಶಿಪ್, ಕಂದಾಯ ಇಲಾಖೆಯ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ನೂರಾರು ಅರ್ಜಿಗಳು ಸಲ್ಲಿಕೆಯಾದವು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಅಪರಜಲ್ದಿ ಜಿಲ್ಲಾಧಿಕಾರಿ ಅಭಿಷೇಕ್ ವಿ, ಉಪವಿಭಾಗಾಧಿಕಾರಿ ಡಾ. ಮೈತ್ರಿ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ಆಶಾಕುಮಾರಿ, ತಹಶೀಲ್ದಾರ್ ಪುರಂದರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಶಶಿಧರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಕುಳ್ಳೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಹಲವು ಕೌಂಟರ್ ತೆರೆಯಲಾಗಿದೆ. ಈ ಅರ್ಜಿಗಳನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ರವಾನಿಸಲಾಗುವುದು. ಇಲಾಖೆಯ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ತಾವಿರುವಲ್ಲಿಯೇ ಅರ್ಜಿದಾರರು ಮಾಹಿತಿ ಪಡೆದುಕೊಳ್ಳಬಹುದಾಗಿದೆ.
-ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿಗಳು, ಶಿವಮೊಗ್ಗ.
ಪ್ರಮುಖ ಸೂಚನೆಗಳು
* ಭೂ ಸುಧಾರಣೆ ಕಾಯ್ದೆಯಡಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ.
* ಪೊಲೀಸ್ ಇಲಾಖೆಯ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ಆಗುತ್ತಿರುವ ದಬ್ಬಾಳಿಕೆ, ದುಂಡಾವರ್ತನೆಗೆ ರಕ್ಷಣೆ ನೀಡಬೇಕು.
* ಕಳೆದೆರಡು ವರ್ಷದ ಹಿಂದೆ ನಿರ್ಮಾಣವಾಗಿರುವ ದ್ಯಾವನಹಳ್ಳಿ ಶಾಲೆಗೆ ತುರ್ತಾಗಿ ಶೌಚಾಲಯ ನಿರ್ಮಿಸಿಕೊಡಬೇಕು.
* ಕೆ. ಜಿ. ಕೊಪ್ಪದಲ್ಲಿ ಸುಮಾರು 60 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದ್ದು, ಅಲ್ಲಿ ಬೆಳೆದು ನಿಂತಿದ್ದ ಗಿಡಗಳನ್ನು ಕಟಾವು ಮಾಡಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ವರದಿ ನೀಡಿ.
* ಸೊರಬ ತಾಲೂಕಿನ ಮೈಸಾವಿ ಮತ್ತು ಹಾಲಗಳಲೆ ಸೇರಿದಂತೆ ಹಲವು ಗ್ರಾಮಗಳಲ್ಲಿ ರೇಷ್ಮೆ ಬೆಳೆಗೆ ವಿಫುಲ ಅವಕಾಶವಿದ್ದು, ಭಾರೀ ಪ್ರಮಾಣದ ರೈತರು ಆಸಕ್ತಿ ಹೊಂದಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರೇಷ್ಮೆ ಬೆಳೆ ಕ್ಷೇತ್ರ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.


