Malenadu Mitra
ರಾಜ್ಯಶಿವಮೊಗ್ಗಸಾಗರ

ಜನರ ಮನೆ ಬಾಗಿಲಿಗೆ ಸೇವೆ ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪ

ಸಾಗರ : ಜನರ ಅಶೋತ್ತರಗಳಿಗೆ ಪೂರಕವಾಗಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ನಡೆಸಲಾಗುತ್ತಿದೆ ಎಂದು  ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಸಾಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಸಾಗರ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು.  ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದಲ್ಲದೆ ಗ್ರಾಮೀಣ ಜನರ ಜ್ವಲಂತ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸುವುದು ಕೂಡ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದಾಗಿ ಸ್ಥಳೀಯ ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆತು ನೆಮ್ಮದಿಯ ಬದುಕು ಸಾಧ್ಯವಾಗಲಿದೆ ಎಂದರು.
 ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಗಳು ನಡೆಯಲಿವೆ. ಪ್ರಸ್ತುತ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಜಾಸೇವಾ ಎಂಬ ಇಲಾಖೆಯನ್ನು ಪ್ರತ್ಯೇಕವಾಗಿ ಸೃಷ್ಟಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲಿ ವಿಲೇವಾರಿ ಗೊಳಿಸಲಾಗುವುದು ಎಂದರು.


ರಾಜ್ಯದಾದ್ಯಂತ 1250 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು 2026ರ ಡಿಸೆಂಬರ್ ಅಂತ್ಯದೊಳಗೆ  ಉದ್ಘಾಟಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಯೋಜನೆಗಾಗಿ ಸುಮಾರು 4300 ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಒಂದೇ ಶಾಲೆಯ ಆವರಣದಲ್ಲಿ ಒಂದರಿಂದ ಪದವಿಪೂರ್ವ ಶಿಕ್ಷಣದವರೆಗೆ ಎಲ್ಲರಿಗೂ ಉಚಿತವಾಗಿ ಶಿಕ್ಷಣ ದೊರೆಲಿದೆ. ಅಲ್ಲದೇ ಮೂಲಭೂತ ಸೌಲಭ್ಯಗಳ ಜೊತೆಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಶಿಕ್ಷಕರನ್ನು ಕೂಡ ನೇಮಕಗೊಳಿಸಲಾಗುತ್ತಿದೆ. ಶಾಲೆಗೆ ಬರುವ ಮಕ್ಕಳ ಅನುಕೂಲಕ್ಕಾಗಿ ಉಚಿತ ಬಸ್ ಸಂಪರ್ಕ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ನುಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, ಸರ್ಕಾರದ ಸೇವೆ ಕಚೇರಿಗಳಿಗೆ ಮಾತ್ರ ಸೀಮಿತವಾಗಿರದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಿ, ಜನರ ಬದುಕಿನಲ್ಲಿ ಬದಲಾವಣೆ ತರುವ ವ್ಯವಸ್ಥೆ ಆಗಬೇಕು ಎಂದರು.
 ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸರ್ಕಾರ ಜನರ ಸಮಸ್ಯೆಗಳಿಗೆ ಕಿವಿಯಾಗಲಿದೆ ಎಂದ ಅವರು ರಾಜ್ಯದ ವಸತಿ ರಹಿತರಿಗೆ ನಿವೇಶನ ನೀಡಿ ನೆಮ್ಮದಿಯ ಸೂರು ನಿರ್ಮಿಸಿಕೊಳ್ಳಲು ಪ್ರತಿ ಜಿಲ್ಲೆಗೆ 50000 ನಿವೇಶನಗಳನ್ನು ಸೃಜಿಸುವಂತೆ ಸೂಚನೆ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಸಾಗರ ತಾಲೂಕು ಒಂದಕ್ಕೆ ಸುಮಾರು ಹತ್ತು ಸಾವಿರ ನಿವೇಶನಗಳ ಬೇಡಿಕೆ ಇದೆ.  ಪ್ರಜಾಸೇವಾ ಆಂದೋಲದಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳನ್ನು ಸಕಾಲಿಕವಾಗಿ ನಿಗದಿಪಡಿಸಿದ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ಸಾಗರ ಪಟ್ಟಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಈಚೆಗೆ ಹಸುಗಳ ಕಳ್ಳತನ ನಿರಂತರವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಡೆ ಗಮನಹರಿಸಿ ಗೋ ಕಳ್ಳರನ್ನು ಹಿಡಿದು ಶಿಕ್ಷಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಅರಣ್ಯಾಧಿಕಾರಿಗಳಾದ ಪ್ರಸನ್ನ ಪಡಗಾರ್‌, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಬಿ ಆರ್ ಜಯಂತ್ ಮತ್ತಿತರರಿದ್ದರು.


 ಮಳೆಕೊರತೆ ಕಾರಣ ಸಾಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆಗಿಂತ ತೀರಾ ಕಡಿಮೆ ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನಿರೀಕ್ಷಿತ ಬೆಳೆ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರವು ಸಾಗರ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸಿ ಅಗತ್ಯ ಸೌಲಭ್ಯ ಮತ್ತು ಪರಿಹಾರವನ್ನು ಒದಗಿಸುವಂತೆ ಮನವಿ ಮಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ನಾಳೆ ನಡೆಯುವ ಕ್ಯಾಬಿನೆಟ್ ನಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸಾಗರ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸಬೇಕು.


–ಬೇಳೂರು ಗೋಪಾಲಕೃಷ್ಣ, ಶಾಸಕರು.

ಅಹವಾಲುಗಳು

 ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಪ್ರಮುಖವಾಗಿ ಖಾತೆ ಬದಲಾವಣೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ, ವಸತಿ ಸೌಲಭ್ಯ ಕಲ್ಪಿಸಿ, ರಸ್ತೆ ದುರಸ್ತಿಗೊಳಿಸಿ ಬಸ್ ಸಂಚಾರ ಕಲ್ಪಿಸಿ ಮುಂತಾದ ಅಹವಾಲುಗಳು ಸಲ್ಲಿಕೆಯಾದವು.


 2001ರಲ್ಲಿ ಸರ್ಕಾರದಿಂದ ನಿಯಮಾನುಸಾರ ಹಕ್ಕು ಹೊಂದಿರುವ ಜಮೀನುಗಳಿಗೆ ಹಕ್ಕುಪತ್ರ ನೀಡುವಲ್ಲಿ ತಹಸೀಲ್ದಾರರು ನಿರ್ಲಕ್ಷ ವಹಿಸುತ್ತಿದ್ದಾರೆ. – ಜೆ. ಎಲ್. ರಾಜಕುಮಾರ್.

 ತಾಲೂಕಿನ ಬರೂರು-ಕೊರ್ಲಿಕೊಪ್ಪದಿಂದ ಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಸಾಗರ ಪಟ್ಟಣಕ್ಕೆ ಪ್ರತಿನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಬಸ್ ಸಂಪರ್ಕ ಒದಗಿಸಬೇಕು.
– ಕು. ಹರ್ಷಿಕಾ, ಕಾರ್ತಿಕ್, ಬರೂರು.

 ವೈದ್ಯಾಧಿಕಾರಿ ಡಾ. ನಾಗೇಂದ್ರಪ್ಪ ಅವರ ನಿರ್ಲಕ್ಷದಿಂದಾಗಿ ಆಪರೇಷನ್ ಗೆ ಬಂದ ಮಹಿಳೆಯ ಕಿಡ್ನಿಗೆ ತೊಂದರೆ ಆಗಿದೆ. ಅಂತಹ ವೈದ್ಯರನ್ನು ಅಮಾನತ್ತುಗೊಳಿಸಬೇಕು ಹಾಗೂ ರೋಗಿಯ ಕುಟುಂಬಕ್ಕೆ ಸೂಕ್ತ ಪರಿಕಾರ ಒದಗಿಸಬೇಕು.
 – ರೂಪ ಶೆಟ್ಟಿ, ಸಿರ್ಸಿ.  

Ad Widget

Related posts

ರಂಜಾನ್,ಬಸವ ಜಯಂತಿ ಆಚರಣೆಗೆ ಗೊಂದಲ ಬೇಡ

Malenadu Mirror Desk

ಕೃಷಿ ಕಾಯಿದೆ ವಿರೋಧಿಸುವವರಿಗೆ ಬಿಜೆಪಿ ಉತ್ತರ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.