Malenadu Mitra
ರಾಜ್ಯಶಿಕಾರಿಪುರಶಿವಮೊಗ್ಗ

ಕನಕದಾಸರ ಗಾಯನ ಸ್ಪರ್ಧೆ: ಪ್ರಥಮ ಬಹುಮಾನ ₹50 ಸಾವಿರ, ನ.29ರಂದು ಅಂತಿಮ ಸುತ್ತು; 1,000ಕ್ಕೂ ಹೆಚ್ಚು ಮಂದಿಯಿಂದ ಸಮೂಹ ಗಾಯನ

ಶಿವಮೊಗ್ಗ: ಕನಕದಾಸರ ಕೃತಿಗಳ ಪರಿಚಯ, ಪ್ರಸಾರ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯು ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯ ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ₹50 ಸಾವಿರ ನೀಡಲಾಗುವುದು ಎಂದು ವಿದ್ವಾನ್ ಶೃಂಗೇರಿ ನಾಗರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18ರಿಂದ 30 ವರ್ಷ ಹಾಗೂ 30 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ದ್ವಿತೀಯ ಬಹುಮಾನವಾಗಿ ₹30 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹20 ಸಾವಿರ ನೀಡಲಾಗುವುದು ಎಂದರು.

ಪ್ರಥಮ ಸುತ್ತಿನ ವಿಡಿಯೊ ಸಲ್ಲಿಕೆಗೆ ನವೆಂಬರ್ 5 ಕೊನೆಯ ದಿನವಾಗಿದೆ. ಸ್ಪರ್ಧಿಗಳು ತಮ್ಮ ಗಾಯನದ ವಿಡಿಯೊವನ್ನು ಲಂಬ ಮಾದರಿಯಲ್ಲಿ ಚಿತ್ರೀಕರಿಸಿ 9148593553 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಬೇಕು. ವಿಡಿಯೊದೊಂದಿಗೆ ಹೆಸರು, ವಯಸ್ಸು, ಆಧಾರ್ ಪ್ರತಿ ಹಾಗೂ ಸಂಪರ್ಕ ವಿವರಗಳನ್ನು ಸಲ್ಲಿಸಬೇಕು ಎಂದರು.

ಇದು ರಾಜ್ಯ ಮಟ್ಟದ ಏಕಗಾಯನ ಸ್ಪರ್ಧೆಯಾಗಿದ್ದು, ಕನಕದಾಸರು ರಚಿಸಿರುವ ಹಾಗೂ ಅವರ ಅಂಕಿತನಾಮ ಹೊಂದಿರುವ ಒಂದು ಕೃತಿಯನ್ನು ಮಾತ್ರ ಹಾಡಬೇಕು. ಕರೋಕೆ ಮತ್ತು ವಾದ್ಯ ಸಂಗೀತ ಬಳಸುವಂತಿಲ್ಲ. ಅಗತ್ಯವಿದ್ದಲ್ಲಿ ಶ್ರುತಿ ಬಳಸಬಹುದು. ಹಾಡುವ ಮೊದಲು ಉಗಾಭೋಗ ಹಾಡುವಂತಿಲ್ಲ. ಮೊದಲ ಸುತ್ತಿನಲ್ಲಿ ಆಯ್ಕೆಯಾದವರು ಎರಡನೇ ಸುತ್ತಿನಲ್ಲಿ ಭಾಗವಹಿಸಲಿದ್ದು, ತಜ್ಞ ತೀರ್ಪುಗಾರರು ಮೌಲ್ಯಮಾಪನ ಮಾಡಲಿದ್ದಾರೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತ್ನಾಡಿ,ನವೆಂಬರ್ 29ರಂದು ಬೆಳಿಗ್ಗೆ 9.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಅಂತಿಮ ಸುತ್ತು ನಡೆಯಲಿದೆ. ಅಂದು ಸಂಜೆ 6ಕ್ಕೆ ರಂಗಮಂದಿರದ ಆವರಣದಲ್ಲಿ ಬಹುಮಾನ ವಿತರಣೆ ಹಾಗೂ ವಿಶೇಷ ಸಮೂಹ ಗಾಯನ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗ ನಗರದ 1,000ಕ್ಕೂ ಹೆಚ್ಚು ಮಂದಿ ಕನಕದಾಸರ ಕೃತಿಗಳನ್ನು ಸಾಮೂಹಿಕವಾಗಿ ಹಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಆನಂದಪುರದ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು, ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಸಂಸ್ಥೆಯ ಕೋಶಾಧ್ಯಕ್ಷ ಕಾಂತೇಶ್ ಈಶ್ವರಪ್ಪ ಉಪಸ್ಥಿತರಿರಲಿದ್ದಾರೆ. ಮಾಹಿತಿಗೆ ದೂರವಾಣಿ ಸಂಖ್ಯೆ: 91485 93553, 83108 76277, 98861 77311, 99008 55404 ಸಂಪರ್ಕಿಸಬಹುದು ಎಂದರು.

 ಪ್ರಮುಖರಾದ ಚೇತನ್, ನಾಗರಾಜ್, ದಿನೇಶ್ ದಾಸ್ ವೈಷ್ಣವ್, ಜಯಶ್ರೀ ಶ್ರೀಧರ್, ಶುಭಾ ರಾಘವೇಂದ್ರ, ಮೈತ್ರೇಯಿ, ಉಷಾ ಅರುಣ್ ಇದ್ದರು.

ಸಚಿವರ ಸ್ಟಿಂಗ್‌ ಆಪರೇಷನ್‌ ಚರ್ಚೆ; ಸಚಿವ ಸಂಪುಟದ ಘನತೆಗೆ ಧಕ್ಕೆ

ಶಿವಮೊಗ್ಗ: ರಾಜ್ಯದ ಐವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ ಎಂಬ ವರದಿಗಳು ಸಚಿವ ಸಂಪುಟದ ಘನತೆಗೆ ಧಕ್ಕೆ ತರುವಂತಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರ ವಿರುದ್ಧ ಹನಿಟ್ರ್ಯಾಪ್‌ ಮಾದರಿಯ ಸ್ಟಿಂಗ್‌ ಆಪರೇಷನ್‌ ನಡೆಯುತ್ತಿದೆ ಎಂಬ ಚರ್ಚೆ ಆತಂಕ ಮೂಡಿಸಿದೆ. ಇಂತಹ ಸುದ್ದಿಗಳನ್ನು ಓದಿದಾಗ ನೋವು, ಅಸಹ್ಯ ಮತ್ತು ಬೇಸರವಾಗುತ್ತದೆ. ಹೈಸ್ಕೂಲ್‌ ಹಾಗೂ ಕಾಲೇಜು ವಿದ್ಯಾರ್ಥಿಗಳು ಹನಿಟ್ರ್ಯಾಪ್‌ ಎಂದರೇನು ಎಂದು ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು ಎಂದು ಅವರು ಪ್ರಶ್ನಿಸಿದರು.

ಐವರು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಅವರನ್ನು ಕರೆದು ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಬೇಕು. ತಪ್ಪು ನಡೆಯುತ್ತಿದ್ದರೆ ಅದನ್ನು ನಿಲ್ಲಿಸಬೇಕೇ ಹೊರತು, ಎಚ್ಚರಿಕೆಯಿಂದ ಮುಂದುವರಿಯುವಂತೆ ಸೂಚಿಸಿದಂತಾಗಬಾರದು ಎಂದರು.

Ad Widget

Related posts

ಬೆಲೆಕುಸಿತ:ಶುಂಠಿ ಬೆಳೆಗಾರ ಆತ್ಮಹತ್ಯೆ

Malenadu Mirror Desk

ತೆರಿಗೆ ಹೆಚ್ಚಳ ವಿರುದ್ಧದ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ

Malenadu Mirror Desk

ಶಂಕಿತ ಉಗ್ರರಿಂದ ಬಾಂಬ್ ತಯಾರಿಕೆಯ ಕಚ್ಚಾವಸ್ತುಗಳು ವಶ , ಎಸ್ಪಿ ಲಕ್ಷ್ಮಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.