ಶಿವಮೊಗ್ಗ : ಹಾಲಿನ ದರ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿಯವರು ರೈತರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಹಾಲಿನ ದರ ಏರಿಕೆಯಾಗಿರಲಿಲ್ಲ. ಈಗ ಏರಿಕೆಯಾಗಿರುವ ೮ ರೂ.ಗಳಲ್ಲಿ ೭ ರೂಪಾಯಿ ಹಾಲು ಉತ್ಪಾದಕರಿಗೆ ಹೋಗುತ್ತಿದೆ. ಇದನ್ನು ಸಹಿಸದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ.
ಹೈನುಗಾರಿಕೆ ಮಾಡುವ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ಕಲ್ಪಿಸಲು ಸರಕಾರ ಮುಂದಾಗಿದೆ. ಬರಗಾಲವಿದೆ ಮೇವು ದುಬಾರಿಯಾಗಿದೆ. ಹಸು ಸಾಕಣೆಕೆ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದ ಚರ್ಚೆ ಮಾಡಿಯೇ ದರ ಹೆಚ್ಚು ಮಾಡಲಾಗಿದೆ. ಗ್ರಾಹಕರಿಗೆ ತೊಂದರೆಯಾಗುತ್ತದೆ ನಿಜ ಆದರೆ ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿಯೇ ಹಾಲಿನ ದರ ಅತೀ ಕಡಿಮೆಯಿದೆ ಎಂಬುದನ್ನು ಗಮನಿಸಬೇಕು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ಜೋರಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಕಬ್ಬು ಬೆಳೆಗಾರರ ಹಿತ ಕಾಪಾಡಬೇಕಿದೆ. ಕಾರ್ಖಾನೆ ಮಾಲೀಕರೊಂದಿಗೆ ಕೇಂದ್ರ ಸರ್ಕಾರ ಮಾತನಾಡಬೇಕಿದೆ. ಬೆಂಬಲ ಬೆಲೆ ಹೆಚ್ಚಿಸಬೇಕಿದೆ. ಸಕ್ಕರೆ ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಬಿಜೆಪಿಯವರು ಯಾಕೆ ಚಕಾರ ಎತ್ತುತಿಲ್ಲ. ಈ ಬಗ್ಗೆ ಸಿಎಂ ಈಗಾಗಲೇ ಚರ್ಚೆ ಮಾಡಿದ್ದಾರೆ. ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಸಮಸ್ಯೆ ಇತ್ಯರ್ಥವಾಗಿ ಕಬ್ಬು ಕಟಾವು ಅಗಬೇಕಿದೆ. ಅದು ವಿಳಂಬವಾದರೆ ಕಾರ್ಖಾನೆ ಮಾಲೀಕರಿಗೆ ನಷ್ಟ ಆಗಲಿದೆ ಎಂದು ಮಧುಬಂಗಾರಪ್ಪ ಹೇಳಿದರು.
ರಾಜ್ಯೋತ್ಸವ:
ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇದೆ. ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕಾರಣ ನಾನು ಅಲ್ಲಿಗೆ ಹೋಗುತಿದ್ದು, ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಇರುವುದಿಲ್ಲ ಎಂದು ಮಧುಬಂಗಾರಪ್ಪ ಹೇಳಿದರು.


