Malenadu Mitra
ರಾಜ್ಯಶಿವಮೊಗ್ಗ

ನವೋಲ್ಲಾಸ ತುಂಬಿದ ನವರಾತ್ರಿ, ಬರದ ನಡುವೆಯೂ ಭರಪೂರ ಖರೀದಿ

ಶಿವಮೊಗ್ಗ: ಹಿಂದೆಂದೂ ಕಂಡರಿಯದ ಬರಗಾಲ ಇದ್ದರೂ ಮಲೆನಾಡಿನಲ್ಲಿ ನವರಾತ್ರಿ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಕಳೆದ ಒಂದು ವಾರದಿಂದ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದಿದ್ದು, ಈಗ ಆಯುಧ ಪೂಜಾ ಮತ್ತು ವಿಜಯದಶಮಿ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಶಿವಮೊಗ್ಗ ನಗರದಲ್ಲಿ ಹಬ್ಬದ ಖರೀದಿ ಭರದಿಂದ ಸಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾದ ಗಾಂಧೀಬಜಾರಿನಲ್ಲಿ ಜನಜಾತ್ರೆಯೇ ನರೆದಿತ್ತು. ನಗರದ ಪ್ರಮುಖ ಸರ್ಕಲ್‌ಗಳಾದ ಶಿವಪ್ಪಯಕ ವೃತ್ತ, ಶೀನಪ್ಪ ಶೆಟ್ಟಿ (ಗೋಪಿ) ಸರ್ಕಲ್‌ , ಜೈಲಯ ವೃತ್ತು, ಪ್ರವಾಸಿ ಮಂದಿರ ಸರ್ಕಲ ಸುತ್ತಮುತ್ತ ಬಾಳೆಕಂದು, ಹೂವು, ಬೂದುಗುಂಬಳ ಸೇರಿದಂತೆ ಹಬ್ಬದ ಪರಿಕರಗಳ ಸಂತೆಯೇ ನೆರೆದಿದೆ.

ಎಲ್ಲೆಂದರಲ್ಲಿ ಕಾಣುವ ಬಣ್ಣ ಬಣ್ಣದ ಚೆಂಡು ಹೂವು ಪ್ರತಿ ಸರ್ಕಲ್‌ಗಳ ಅಂದವನ್ನು ಹೆಚ್ಚಿಸಿವೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ರೈತರು, ವರ್ತಕರು ಪೂಜಾ ಪರಿಕರ ಮಾರಾಟಕ್ಕೆ ಬಂದಿದ್ದು, ಕಿಕ್ಕಿರಿದ ಸಾರ್ವಜನಿಕರ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ವಾಹನ ಮತ್ತು ತಮಗೆ ಅನ್ನ ನೀಡುವ ಉದ್ಯಮದ ಯಂತ್ರಗಳು, ಮಳಿಗೆ ಮತ್ತು ಕಟ್ಟಡಗಳಿಗೆ ಅಲಂಕಾರ ಮಾಡಲು ಹೂವಿನ ಖರೀದಿ ಜೋರಾಗಿ ನಡೆದಿತ್ತು. ಸರಕಾರಿ ಕಚೇರಿ ಮತ್ತು ಕೆಲವು ಖಾಸಗಿ ಕಂಪನಿಗಳಲ್ಲಿ ಇಂದೇ ಆಯುಧ ಪೂಜೆ ನಡೆಸಿದ್ದು, ವಾಹನಗಳಿಗೆ ಸಿಂಗರಿಸಿದ್ದ ದೃಶ್ಯ ಕಂಡುಬಂತು. ಕಳೆದ ಕೆಲದಿನಗಳಿಂದ ಹೂವಿನ ದರ ಕುಸಿದಿತ್ತು. ಆದರೆ ನವರಾತ್ರಿ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆ ಕಂಡಿದೆ.

ಚಂಡು ಹೂ, ಸೇವಂತಿಗೆ, ಕನಕಾಂಬರ, ಗುಲಾಬಿ,ಮಲ್ಲಿಗೆ ಹೂವುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದೇ ರೀತಿ ಸೇಬು, ಕಿತ್ತಳೆ, ಬಾಳೆಹಣ್ಣು ಮತ್ತೊ ಮೊಸಂಬಿ ಹಣ್ಣುಗಳಿಗೆ ಇನ್ನಿಲ್ಲದ ಬೇಡಿಕೆ ಇದೆ. ಆಯುಧ ಪೂಜೆ ದಿನ ವಾಹನ, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುವುದರಿಂದ ಹೂವಿನ ಬೇಡಿಕೆಯೂ ಹೆಚ್ಚಾಗಿದೆ.

ಪ್ರತಿ ಕೆ.ಜಿ ಕನಕಾಂಬರ ೮೦೦ ರೂ, ಮಲ್ಲಿಗೆ ೮೦೦, ಗುಲಾಬಿ ೪೦೦, ಸೇವಂತಿಗೆ ೪೦೦ ರೂ..ನಂತೆ ಮಾರಾಟವಾಗುತ್ತಿವೆ. ಆಯುಧ ಪೂಜೆಯ ದಿನ ಬಳಕೆಗೆ ಬೂದುಗುಂಬಳ ಪ್ರತಿ ಕೆ.ಜಿಗೆ ೪೦ರಿಂದ ಆರಂಭಗೊಂಡು ಗಾತ್ರದ ಆಧಾರದ ಮೇಲೆ ಒಂದಕ್ಕೆ ೧೦೦- ೨೦೦ರೂ. ವರೆಗೆ ಮಾರಾಟವಾದವು.
ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡು ಹೂವಿಗೆ ಮಾರಿಗೆ ೬೦ ರಿಂದ ೧೦೦ ರವರೆಗೆ ಇದೆ. ಇತರ ಸೇವಂತಿಗೆ, ಜಾಜಿ, ಮತ್ತು ಕಾಕಡ ಮಾರಿಗೆ ೧೫೦ ರಿಂದ ೨೫೦ ರವರೆಗೆ ಇದೆ. ಬಿಡಿ ಹೂವುಗಳು ಕೆಜಿ.೪೦೦ ರೂ. ಗಡಿ ದಾಟಿದೆ. ಸೇಬು, ಬಾಳೆಹಣ್ಣು, ಮೊಸಂಬಿ ಎಲ್ಲಾ ರೀತಿಯ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿವೆ.

ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು. ಬರಗಾಲ ಹಳ್ಳಿಗಳ ಮೇಲೆ ಪರಿಣಾಮ ಬೀರಿದ್ದು, ನಗರವಾಸಿಗಳಿಗೆ ಇನ್ನೂ ನೇರವಾಗಿ ತಲುಪದ ಕಾರಣ ನವರಾತ್ರಿ ಸಂಭ್ರಮ ಎಂದಿನಂತೆ ನಡೆದಿದೆ.

Ad Widget

Related posts

ಕೊರೊನ ಮತ್ತಷ್ಟು ಗಂಭೀರ: 17 ಸಾವು, ಎಲ್ಲಿ ಎಷ್ಟು ಸೋಂಕಿತರು ?

Malenadu Mirror Desk

ಈಡಿಗರ ಹಾಸ್ಟೆಲ್‌ಗೆ ಅನುದಾನ ನೀಡಲು ಸಿಎಂ ಗೆ ಮನವಿ

Malenadu Mirror Desk

ನೆಟ್ವರ್ಕ್ ಸಮಸ್ಯೆ ಸಿಎಂಗೆ ಬೇಳೂರು ಮನವಿ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.