ಶಿವಮೊಗ್ಗ ನಗರದ ಗಾಂಧಿಬಜಾರಿನಲ್ಲಿರುವ ಮಾತಾಶ್ರೀ ನಾವೆಲ್ಟಿಸ್ ಸೌಂದರ್ಯವರ್ಧಕಗಳ ಮಳಿಗೆ ಶನಿವಾರ ರಾತ್ರಿ ಸಂಭವಸಿದ ಅಗ್ನಿ ಅವಘಡದಲ್ಲಿ ಸಂಪೂರ್ಣ ಭಸ್ಮವಾಗಿದೆ. ಹುಣಸೋಡು ದುರಂತದ ಬೆನ್ನಲ್ಲೇ ರಾತ್ರಿ ಹೊತ್ತಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಾಕಷ್ಟು ಪ್ರಯತ್ನ ನಡೆಸಿತಾದರೂ ಮಳಿಗೆಯಲ್ಲಿನ ಸೌಂದರ್ಯವರ್ಧಕಗಳಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ರಕ್ಷಣಾ ಸಿಬ್ಬಂದಿಯ ಸಕಾಲಿಕ ಪ್ರವೇಶದಿಂದ ಅಕ್ಕಪಕ್ಕದ ಮಳಿಗೆಗಳು ಸುಡುವುದನ್ನು ತಪ್ಪಿಸಿದಂತಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೂರು ದಾಖಲಾಗಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ. ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಸಚಿವ ಈಶ್ವರಪ್ಪ ಭೇಟಿ:
ಅಗ್ನಿ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಭೇಟಿ ನೀಡಿ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಕಾರ್ಪೊರೇಟರ್, ಚನ್ನಬಸಪ್ಪ ಮತ್ತಿತರರು ಹಾಜರಿದ್ದರು.