Malenadu Mitra
ರಾಜಕೀಯರಾಜ್ಯಶಿವಮೊಗ್ಗ

ಈಶ್ವರಪ್ಪ ಬಂಡಾಯದ ಹಿಂದಿನ ಬಯಕೆಯಾದರೂ ಏನು ?

#ನಾಗರಾಜ್ ನೇರಿಗೆ

ರಾಜ್ಯ ರಾಜಕಾರಣದಲ್ಲಿ  ಸಂಪುಟದರ್ಜೆ ಸಚಿವರೊಬ್ಬರು ತಮ್ಮ ಖಾತೆಯಲ್ಲಿ ಮುಖ್ಯಮಂತ್ರಿಯ ಹಸ್ತಕ್ಷೇಪ ಕುರಿತು ರಾಜ್ಯಪಾಲರಿಗೆ ದೂರು ನೀಡಿರುವುದು ಇದೇ ಮೊದಲು. ಇಂತಹ ಬೆಳವಣಿಗೆ ಏಕಾಏಕಿ ನಡೆದಿದ್ದಲ್ಲ ಎಂಬುದು ರಾಜಕೀಯ ಬಲ್ಲ ಯಾರಿಗೇ ಆದರೂ ಗೊತ್ತಾಗುತ್ತದೆ. ರಾಜ್ಯ ಬಿಜೆಪಿ ಬಂಡಿಯನ್ನು ಜೋಡೆತ್ತುಗಳಂತೆ ಎಳೆದ ಇಬ್ಬರು ನಾಯಕರ ನಡುವೆ ಇಂತಹದೊಂದು ವೈಮನಸು ಬರಲು ಬಲವಾದ ಕಾರಣವೂ ಇದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸರಕಾರ ತಂದ  ಕೀರ್ತಿಯನ್ನು  ಯಡಿಯೂರಪ್ಪ  ಮುಡಿಗೇರಿಸಿಕೊಂಡಿದ್ದಾರೆ. ಆದರೆ  ಈ ಕೀರ್ತಿಯನ್ನು ಎಷ್ಟು ದಿನಾ ಅಂತ ಅವರಿಗೇ ಬಿಡುವುದು ಎಂಬ ಆಲೋಚನೆ ಆವರ ಎಡಬಲವಿದ್ದವರಿಗೆ ಬಂದಿರುವುದು ಸಹಜ. ಈ ಕಾರಣದಿಂದಲೇ ಮೊದಲ ಸರ್ಕಾರದ ಅವಧಿಯಲ್ಲಿಯೇ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಮಾತ್ರವಲ್ಲದೆ, ಸರದಿಯಂತೆ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಿ ಅಧಿಕಾರವನ್ನೂ ಅನುಭವಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ಮಕ್ಕಳು ಹಾಗೂ ಅತ್ಯಾಪ್ತರ ಕಾರಣಕ್ಕಾಗಿ ಬಿಎಸ್‌ವೈ ಹುದ್ದೆ ಕಳೆದುಕೊಂಡರು ಆ ಅವಧಿಯಲ್ಲಿ ಬಂಡಾಯಗಾರರಿಗೆ ನಾಯಕತ್ವ ಕೊಟ್ಟಿದ್ದು, ಪ್ರಭಾವಿ ನಾಯಕ ಈಶ್ವರಪ್ಪ ಆದರೂ ಅದರ ಫಲ ಉಂಡದ್ದು ಮಾತ್ರ ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು. ಅನಂತ್ ಕುಮಾರ್ ನಿಧನಾನಂತರ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನಂತರದ ಹಿರಿತನ ಕಾಣುತ್ತಿರುವುದು ಈಶ್ವರಪ್ಪ ಅವರಲ್ಲಿ ಮಾತ್ರ. ಜಾತಿ ಹಾಗೂ ಸ್ವಾಮಿನಿಷ್ಠೆ ಕಾರಣಕ್ಕೆ ಶೆಟ್ಟರ್ ಮತ್ತು ಸದಾನಂದ ಗೌಡ ಅವರು ಅವಕಾಶ ಪಡೆದುಕೊಂಡಾಗಿದೆ. ಈಗಿನ ಸರದಿ ಈಶ್ವರಪ್ಪ ಅವರು, ಆದರೆ  ರಾಜ್ಯದಲ್ಲಿರುವ ಲಿಂಗಾಯತ ಬಲದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಮುಟ್ಟಲೂ ಹೆದರುತ್ತಿರುವ ಬಿಜೆಪಿ ಹೈಕಮಾಂಡ್ ಅವರಾಗಿಯೇ ಖೆಡ್ಡಕ್ಕೆ ಬೀಳಲಿ ಎಂದು ಕಾಯುತ್ತಿರುವುದೂ ಸುಳ್ಳಲ್ಲ. ಈ ರೀತಿಯ ವರ್ತುಲ ಸೃಷ್ಟಿಸುವಲ್ಲಿಯೇ “ಸಂತೋಷ’ಕಾಣುವ ಕೆಲ ನಾಯಕರು ದಿಲ್ಲಿ ಹಾಗೂ ನಾಗಪುರದ ಸಂಪರ್ಕದಲ್ಲಿದ್ದಾರೆ.

ಈಶ್ವರಪ್ಪ ಆಸೆ ಸಹಜ

ಒಂದು ಕಾಲದಲ್ಲಿ ಚಿತ್ರಾನ್ನ ತಿಂದುಕೊಂಡು ಬಜಾಜ್ ಸ್ಕೂಟರ್ ಮೇಲೆ ಓಡಾಡಿ ಶಿವಮೊಗ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಿದವರು ಯಡಿಯೂರಪ್ಪ ಮತ್ತು ಈಶ್ವರಪ್ಪ. ಯಡಿಯೂರಪ್ಪರಿಗೆ ಹೋಲಿಸಿದರೆ ಈಶ್ವರಪ್ಪ ಜೂನಿಯರ್ ಆದರೂ ಕೂಡಾ ತಮಗಿರುವ ಸಂಘನಿಷ್ಠೆಯಿಂದಾಗಿ ಜಾತಿ ಮೀರಿದ ಪ್ರಭಾವವನ್ನು ಸಂಘಪರಿವಾದಲ್ಲಿ ಬೆಳೆಸಿಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷ ಪ್ರವರ್ದಮಾನಕ್ಕೆ ಬಂದಂತೆ ಈಶ್ವರಪ್ಪ ಅವರ “ಬಾಯಿ ಬಲ’ವೂ ಹೆಚ್ಚಾಗಿ ಯಡಿಯೂರಪ್ಪ ಅವರಿಗೆ ಪರ್‍ಯಾಯ ಎಂಬಂತೆ ಸಂಘದ ವಲಯದಲ್ಲಿ ಬಿಂಬಿತವಾಗಿದ್ದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರ ವೇಗಕ್ಕೆ ಕಡಿವಾಣ ಹಾಕಲು ಸಂಘಕ್ಕೆ ದಾಳವಾಗಿದ್ದೇ ಈಶ್ವರಪ್ಪ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಈಶ್ವರಪ್ಪ ಬರೀ ಬಂದೂಕು ಇಡುವ ಹೆಗಲಾಗುವ ಬದಲು ತಾವೇ ಬಂದೂಕು ಆಗಬೇಕೆಂಬ ಹಂಬಲತೋರುತ್ತಿರುವುದರಲ್ಲಿ ತಪ್ಪೇನು ಇಲ್ಲ. ಈ ಕಾರಣದಿಂದಲೇ ಕದನ ಶುರುವಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಮತ್ತದೇ ತಪ್ಪು

೨೦೧೧ ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕುಟುಂಬ,ಸ್ವಜನ ಹಾಗೂ ಸ್ವಜಾತಿ ಪಕ್ಷಪಾತ ಎಂಬ ಆರೋಪ ಕೇಳಿಬಂದು ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಈ ಬಾರಿಯೂ ಅದಕ್ಕಿಂತ ಭಿನ್ನವಾಗಿಯೇನು ಇಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರೊಬ್ಬರು ದೂರ ಇದ್ದಾರೆ ಎಂಬುದನ್ನು ಬಿಟ್ಟರೆ  ಉಳಿದೆಲ್ಲ ಆರೋಪಗಳು ಅವೇ ಆಗಿವೆ. ಯಡಿಯೂರಪ್ಪ ಸಂಪುಟಕ್ಕೆ ಪುತ್ರ ವಿಜಯೇಂದ್ರ ಒಬ್ಬರೇ ಸಾಕು ಸಚಿವರ್‍ಯಾಕೆ ಬೇಕು ಎಂಬ ಆರೋಪವನ್ನು ಮೂಲ ಬಿಜೆಪಿಯ ಸಂಘನಿಷ್ಠ ಬಣ ಮಾಡುತ್ತಿದೆ.

ಸೇರಿಗೆ ಸವ್ವಾಸೇರು


ಒಂದು ಕಾಲದಲ್ಲಿ ಆಪ್ತಮಿತ್ರರಂತೆ ಇದ್ದ ಯಡಿಯೂರಪ್ಪ -ಈಶ್ವರಪ್ಪ ಅಧಿಕಾರ ಸಿಗುತ್ತಿದ್ದಂತೆ ಮೇಲ್ನೋಟಕ್ಕೆ ಚೆನ್ನಾಗಿದ್ದಂತೆ ತೋರುತ್ತಿದ್ದರೂ ಒಳಾಂತರದಲ್ಲಿ ಹಾಗಿಲ್ಲ. ಸ್ವತಃ ಈಶ್ವರಪ್ಪ ಅವರೇ ಕೆಲ ಸಂಗತಿಗಳಲ್ಲಿ ಭಿನ್ನಾಭಿಪ್ರಾಯ ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅಧಿಕಾರದ ಕುದುರೆ ಏರಿದ ಮೇಲೆ “ನಾನು ನಮ್ಮವರು’ ಎಂಬ ಭಾವನೆ ಇಬ್ಬರೂ ನಾಯಕರಲ್ಲಿ ಬಂದಿರುವುದೇ ಈ ಎಲ್ಲ ಭಿನ್ನಮತಕ್ಕೆ ಕಾರಣವಾಗಿದೆ. ಯಡಿಯೂರಪ್ಪ -ಈಶ್ವರಪ್ಪ ಅವರು ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತಲೇ ಅಧಿಕಾರದ ಒಂದೊಂದೇ  ಮೆಟ್ಟಿಲು ಏರಿದವರು. ತಮ್ಮ ಬಳಿಕ ತಮ್ಮ ಮಕ್ಕಳನ್ನು ಅಧಿಕಾರಕ್ಕೆ ತರುತ್ತಲೇ ಈ ಭಿನ್ನಮತ ಮತ್ತಷ್ಟು ಉಲ್ಬಣಿಸಿದೆ. ಬಿ.ವೈ.ರಾಘವೇಂದ್ರ ಅವರನ್ನು ಮೊದಲ ಬಾರಿಗೆ ಎಂಪಿ ಅಭ್ಯರ್ಥಿ ಮಾಡಿದಾಗ ಈಶ್ವರಪ್ಪ ಅಪಸ್ವರ ಎತ್ತಿದ್ದರು. ಆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಗೆಲುವಿನ ಅಂತರ ಕಡಿಮೆಯಾಗಿದ್ದನ್ನು ಸಾರ್ವಜನಿಕರ ಸಭೆಯಲ್ಲಿಯೇ ಯಡಿಯೂರಪ್ಪ ಪ್ರಶ್ನಿಸಿದ್ದರು. ಇದಾದ ಬಳಿಕ ಈಶ್ವರಪ್ಪ ಸರಕಾರದಲ್ಲಿ ಬಂಡಾಯ ಎದ್ದವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ನಾಯಕತ್ವ ನೀಡಿ ಸೇರಿಗೆ ಸವ್ವಾಸೇರು ಎಂದಿದ್ದರು.

ಈಶ್ವರಪ್ಪರಿಗೆ ಠಕ್ಕರ್


ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕುಟುಂಬ ರಾಜಕಾರಣ ಎಂಬುದೊಂದು ಸಂಗತಿಯೇ ಅಲ್ಲ ಎನ್ನುವಂತಾಯಿತು. ಪರಿಸ್ಥಿತಿಗೆ ಅನುಗುಣವಾಗಿ ಈಶ್ವರಪ್ಪ ಕೂಡಾ ತಮ್ಮ ಪುತ್ರ ಕೆ.ಇ.ಕಾಂತೇಶ್ ಅವರನ್ನು ರಾಜಕಾರಣಕ್ಕೆ ತಂದರು. ಮೊದಲ ಪಾಠಶಾಲೆಯಾಗಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ಕಾಂತೇಶ್ ಎರಡನೇ ಹೆಜ್ಜೆಯನ್ನೇ ವಿಧಾನ ಸೌಧಕ್ಕೆ ಇಡಲು ನಿರ್ಧರಿಸಿದ್ದರು. ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ತಂದೆಯ ಪ್ರಭಾವಳಿ ಕೆಲಸ ಮಾಡುತ್ತದೆ ಎಂಬ ಅಚಲ ವಿಶ್ವಾಸದಿಂದ ರಾಣೆಬೆನ್ನೂರು -ಶಿವಮೊಗ್ಗ ರಸ್ತೆಯಲ್ಲಿ ಸಾಕಷ್ಟು ಟೈರು ಸವೆಸಿದ್ದರು. ಆದರೆ ಸಂಪನ್ಮೂಲ ಹಾಕಿ ಸರಕಾರ ತಂದವರು ಸುಮ್ಮನಿರುತ್ತಾರೆಯೇ ? ಸಮಯ ನೋಡಿ ಠಕ್ಕರ್ ಕೊಟ್ಟಿದ್ದರಿಂದ ಕಾಂತೇಶ್ ಅವರಿಗೆ ಟಿಕೆಟ್ ಸಿಗಲಿಲ್ಲ.
ಮಗನಿಗೆ ಹೇಗಾದರೂ ಮಾಡಿ ಶಕ್ತಿಸೌಧದ ದಾರಿ ತೋರಿಸಬೇಕೆಂಬ ಇರಾದೆಯಲ್ಲಿರುವ ಸಚಿವ ಈಶ್ವರಪ್ಪ ಅವರು, ಸರಕಾರದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪದ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್ ಎಷ್ಟೇ ಮಾತನಾಡಿದರೂ ಯಾರೂ ಸೀರಿಯಸ್ ಆಗಿ ಪರಿಗಣಿಸುತ್ತಿಲ್ಲ ಎಂಬ ಕಾರಣಕ್ಕೆ ತಾವೇ ಸ್ವತಃ ಫೀಲ್ಡಿಗಿಳಿದಿದ್ದಾರೆ. ಕುರುಬ ಸಮಾಜಕ್ಕೆ ಎಸ್ಸಿ ಮೀಸಲಾತಿ ಕೊಡಿಸಲು ಜಾತಿ ಸಂಘಟನೆ ಮಾಡಿ ನಾನೂ “ಮಾಸ್ ಲೀಡರ್’ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್‌ಗೆ ನೀಡಿದ್ದಾರೆ. ಈ ರೀತಿ ಹದಗೊಂಡಿರುವ ಹೊಲದಲ್ಲಿ ಬಿತ್ತನೆ ಮಾಡಿ ಫಸಲು ಕೊಯ್ಯುವ ಮಹತ್ವಾಕಾಂಕ್ಷೆಯಿಂದ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.


ಲೌಲಿಸಿಪ್
ಪಕ್ಷದಲ್ಲಿ ಹಿರಿತನ ಹಾಗೂ ಸಂಘದ ಬೆಂಬಲ ಎರಡೂ ಇರುವಾಗ ನಾನೇಕೆ ಸಿಎಂ ಆಗಬಾರದು ಎಂದು ಈಶ್ವರಪ್ಪ ಅವರು ಕಾಲು ಕೆದರಿದ್ದಾರೆ. ತಮ್ಮೊಂದಿಗೆ  ಉಳಿದವರ ಅಸಮಾಧಾನವೂ  ಹರಳುಗಟ್ಟುತ್ತದೆ, ಅದಕ್ಕೆ ಸಂಘವು ರೂಪ ಕೊಡುತ್ತದೆ  ಎಂದು ಕಾಯುತ್ತಿದ್ದಾರೆ. ಆಸೆ ಈಡೇರುತ್ತೊ ಬಿಡುತ್ತೊ ಗೊತ್ತಿಲ್ಲ ಆದರೆ ಈಗ ಹಾಕಿದ ಗುಟುರು ಮುಂದೆ ಫಲ ನೀಡಬಹುದು ಎಂಬ ಮುಂದಾಲೋಚನೆಯೂ ಈಶ್ವರಪ್ಪರಿಗೆ ಇರಬಹುದು. ಈ ನಡುವೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಅವರನ್ನು ಕಣಕ್ಕಿಳಿಸುವ ವಿಚಾರವೂ ಈಶ್ವರಪ್ಪರಲ್ಲಿದೆ. ಆದರೆ ಯಡಿಯೂರಪ್ಪ ಅವರ ಬಣದಿಂದ ಜ್ಯೋತಿ ಪ್ರಕಾಶ್ ಹೆಸರು ತೇಲಿ ಬರುತ್ತಿದೆ. ಈ ಸಂಗತಿಯೂ ಈಶ್ವರಪ್ಪ ಅವರನ್ನು ಕೆರಳಿಸಿದೆ ಎಂದೂ ಅವರ ಬೆಂಬಲಿಗರ ಆಂಬೋಣವಾಗಿದೆ. ಏನೇ ಆದರು ಈ ಇಬ್ಬರೂ ನಾಯಕರ ಮುನಿಸು ಶಿವಮೊಗ್ಗದ ಅಭಿವೃದ್ಧಿ ಮೇಲೆ ಅಡ್ಡ ಪರಿಣಾಮ ಬೀರದಿರಲಿ ಎಂಬುದೇ ಮಲೆನಾಡಿನ ಜನರ ಆಶಯವಾಗಿದೆ.

Ad Widget

Related posts

ಗೋಹತ್ಯೆ ಕಾಯ್ದೆಗೆ ಸಹಿ ಬೇಡ

Malenadu Mirror Desk

ಶಿವಮೊಗ್ಗದಲ್ಲಿ 720 ಮಂದಿಗೆ ಸೋಂಕು, 5 ಸಾವು

Malenadu Mirror Desk

ಈಸೂರು ಕಾಲೇಜಿನಲ್ಲಿ ಜಿಎಸ್ ಎಸ್ ಜನ್ಮದಿನಾಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.