ಧಾರವಾಡ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವು
ಗೆಳತಿಯರ ಜತೆ ಪ್ರವಾಸ ಹೋಗುವಾಗ ಧಾರವಾಡ ಸಮೀಪ ಅಪಘಾತಕ್ಕೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೇದಾ ಮಂಜುನಾಥ್ ಭಾನುವಾರ ಕೊನೆಯುಸಿರೆಳೆದಿದ್ದು,ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ವೇದಾ ಮಂಜುನಾಥ್ ಅವರು ತಮ್ಮ ಎರಡೂ ಕಿಡ್ನಿ ಮತ್ತು ಯಕೃತ್(ಲಿವರ್) ದಾನ ಮಾಡುವ ಮೂಲಕ ತಾಯ್ತನ ಮೆರೆದು ಇಹಲೋಕ ತ್ಯಜಿಸಿದ್ದಾರೆ. ವೇದಾ ಅವರು ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅವರ ಸಹೋದರ ಎಚ್.ಎಂ. ಮಲ್ಲಪ್ಪ ಅವರ ಸೊಸೆ. ಮೃತರು ಪತಿ, ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕಾಲೇಜು ಗೆಳತಿಯರೆಲ್ಲ ಸೇರಿ ಪ್ರತಿ ವರ್ಷ ಪ್ರವಾಸ ಹೋಗುವ ಪರಿಪಾಠ ಇಟ್ಟುಕೊಂಡಿದ್ದರು. ವೈದ್ಯರು ಸೇರಿದಂತೆ ನಾನಾ ಉದ್ಯೋಗ ಮಾಡುವ ಎಲ್ಲ ಸಹಪಾಠಿಗಳು ಒಟ್ಟಿಗೆ ಸೇರುವ ಈ ಸಂತೋಷಕ್ಕೆ ಈ ಬಾರಿ ಜವರಾಯ ಅವಕಾಶ ಮಾಡಿಕೊಡಲಿಲ್ಲ. ಜನವರಿ ೧೫ ರಂದು ರಾತ್ರಿ ಗೋವಾಕ್ಕೆ ಹೋಗುತ್ತಿದ್ದ ಇವರಿದ್ದ ವಾಹನ ಧಾರವಾಡದ ಇಟಿಗಟ್ಟಿ ಬಳಿ ಅಪಘಾತಕ್ಕೀಡಾಗಿ ೧೧ ಮಂದಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು,
ವೇದಾ ಮಂಜುನಾಥ್ ಅವರನ್ನು ಏರ್‌ಲಿಫ್ಟ್ ಮಾಡಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ಗಾಯಗೊಂಡಿದ್ದ ವೇದಾ ಅವರಿಗೂ ಚಿಕಿತ್ಸೆ ವಿಫಲವಾಗಿ ಭಾನುವಾರ ಬೆಳಗ್ಗೆ ಹತ್ತುಗಂಟೆ ಸುಮಾರಿಗೆ ಅವರು ನಿಧನರಾದರು. ಈ ದುರಂತದಲ್ಲಿ ಸತ್ತವರ ಸಂಖ್ಯೆ ೧೩ ಕ್ಕೇರಿದಂತಾಗಿದೆ. ಮೃತರ ಇಚ್ಚೆಯಂತೆ ಅವರ ಕಿಡ್ನಿಗಳು ಮತ್ತು ಯಕೃತ್ ಅನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ವೇದಾ ಮಂಜುನಾಥ್ ನಿಧನಕ್ಕೆ ಶಿವಮೊಗ್ಗದ,ಸ್ವಾಮೀಜಿಗಳು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹಸೂಡಿಯಲ್ಲಿ ಅಂತ್ಯಕ್ರಿಯೆ: ವೇದಾ ಮಂಜುನಾಥ್ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹಸೂಡಿಯಲ್ಲಿರುವ ಅವರ ತೋಟದಲ್ಲಿ ನೆರವೇರಲಿದೆ. ಭಾನುವಾರ ರಾತ್ರಿ ಎಂಟು ಗಂಟೆಯಿಂದ ಸೋಮವಾರ ಮಧ್ಯಾಹ್ನ ೧೨ ರವರೆಗೆ ಜಯದೇವ ಬಡಾವಣೆಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಮೃತರ ಬಂಧುಗಳಾದ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್ ತಿಳಿಸಿದ್ದಾರೆ.