ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪ್ರಕರಣದಂತಹ ದುರಂತ ನಡೆಯಲು ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಡಾ.ಶ್ರೀನಿವಾಸ್ ಕರಿಯಣ್ಣ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ದುರಂತ ತುಂಬಾ ನೋವು ತರುವಂತದು. ಇದರಿಂದ ಸಾವುನೋವು ಮಾತ್ರವಲ್ಲದೆ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.ಅಕ್ರಮವಾಗಿ ನಡೆಯುತ್ತಿರುವ ಶಾಸಕರು ಮತ್ತು ಸಚಿವರುಗಳ ಶ್ರೀರಕ್ಷೆ ಇದೆ. ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಗಣಿಮಾಲೀಕರೊಂದಿಗೆ ಸನ್ಮಾನ ಮಾಡಿಸಿಕೊಳ್ಳುತ್ತಾ ಮೃದುಧೋರಣೆ ಹೊಂದಿದ್ದಾರೆ. ಅವರ ಬೆಂಬಲಿಗರು ಅನೇಕರು ಈ ವ್ಯವಹಾರದಲ್ಲಿರುವ ಶಂಕೆಯಿದೆ ಎಂದು ಶ್ರೀನಿವಾಸ್ ಆರೋಪಿಸಿದರು.
ಅಕ್ರಮ ಕ್ವಾರಿ ಮತ್ತು ಜನರಿಗಾಗುತ್ತಿರುವ ತೊಂದರೆ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ತಾಳಿದ್ದರಿಂದ ಇಂತಹ ದುರಂತ ನಡೆದುಹೋಗಿದೆ. ಬೃಹತ್ ಪ್ರಮಾಣದ ಸ್ಫೋಟಕ ಹೇಗೆ ಬಂತು ಮತ್ತು ಅದು ಪ್ರತಿ ತಿಂಗಳೂ ಬರುತ್ತಿತ್ತು ಎಂಬ ಮಾಹಿತಿ ಇದ್ದು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸರಕಾರ ಈ ದಿಸೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಅಷ್ಟೊಂದು ಪ್ರಮಾಣದ ಸ್ಫೋಟಕ ತರಲು ಯಾರು ಅನುಮತಿ ಕೊಟ್ಟವರು. ಅರಣ್ಯ, ಕಂದಾಯ, ಪರಿಸರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಮರಳು ದಂಧೆ ನಡೆಯುತ್ತಿದ್ದು, ಈ ಬಗ್ಗೆ ಹಿಂದೆಯೇ ಸಾಕಷ್ಟು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮಸ್ಥರು ಸುತ್ತಮುತ್ತಲ ರೈತರು ನಿತ್ಯ ತಮಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆದಿದ್ದರೂ ಸ್ಥಳೀಯ ಶಾಸಕರು ನಿರ್ಲಕ್ಷ್ಯ ಧೋರಣೆ ತಾಳಿದ್ದರು. ವಕೀಲರು ಗಣಿಮಾಲೀಕರು ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವ್ಯಾಪ್ತಿಯಲ್ಲಿ ಸುಮಾರು ೧೪೦ ಕ್ವಾರಿಗಳಿದ್ದು, ಅವುಗಳಲ್ಲಿ ಕೇವಲ ೯೦ ಕ್ಕೆ ಮಾತ್ರ ಪರವಾನಗಿ ಇದೆ ಎಂದರೆ ಇಲ್ಲಿನ ಅಕ್ರಮ ಎಷ್ಟಿದೆ ಎಂದು ಗೊತ್ತಾಗುತ್ತದೆ. ಶಾಸಕರು ಸಚಿವರಿಗೆ ಈ ವಿಚಾರಗಳೆಲ್ಲ ಗೊತ್ತಿರದೇ ಇರಲಿಕ್ಕೆ ಸಾಧ್ಯವಿಲ್ಲ. ಹುಣಸೋಡಿನಲ್ಲಿ ಮೊನ್ನೆ ಸ್ಫೋಟ ನಡೆದ ಕ್ರಷರ್‌ನ ಪರವಾನಗಿ ಹಲವು ವರ್ಷಗಳಿಂದ ನವೀಕರಣ ಆಗಿಲ್ಲ ಎಂಬ ಮಾಹಿತಿ ಇದೆ. ಕಲ್ಲುಕ್ವಾರಿ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಚಿವರ ಹೇಳಿಕೆಯಲ್ಲಿಯೇ ಗೊಂದಲಗಳಿರುವ ಬಗ್ಗೆ ಮಾದ್ಯಮಗಳಲ್ಲೂ ವರದಿಯಾಗಿದೆ ಎಂದು ದೂರಿದರು.
ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರೊಂದಿಗೆ ದಿನನಿತ್ಯ ಇರುವ ಕ್ವಾರಿ ಮಾಲೀಕರಿಂದಲೇ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಸರಕಾರ ಕೂಡಲೇ ಈ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಕಲ್ಲುಕ್ವಾರಿಗಳಿಂದ ಸ್ಥಳೀಯ ನಿವಾಸಿಗಳಿಗಾದ ನಷಟ ತುಂಬಿಕೊಡಬೇಕು. ಜ.೨೧ ರಂದು ರಾತ್ರಿ ನಡೆದ ಮಹಾಸ್ಫೋಟದಿಂದ ಹುಣಸೋಡು , ಅಬ್ಬಲಗೆರೆ, ಕಲ್ಲಗಂಗೂರು, ಬಸವನ ಗಂಗೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಮನೆ, ಕಟ್ಟಡ ಹಾಗೂ ಪೀಠೋಪಕರಣಗಳು ದ್ವಂಸವಾಗಿವೆ. ಈ ಬಗ್ಗೆ ಸರಕಾರ ಸಮೀಪಕ್ಷೆ ನಡೆಸಿ ಸೂಕ್ತ ಪರಿಹಾರ ನೀಬೇಕೆಂದು ಶ್ರೀನಿವಾಸ್ ಕರಿಯಣ್ಣ ಒತ್ತಾಯಿಸಿದರು. ಜಿಲ್ಲಾಕಾಂಗ್ರೆಸ್ ಕಾರ್ಯದರ್ಶಿ ಜಗದೀಶ, ವಕೀಲ ಪ್ರಕಾಶ್, ಪುನೀತ ಹೆಬ್ಬೂರು, ಮತ್ತಿತರರಿದ್ದರು
ಕ್ಷೇತ್ರವ್ಯಾಪ್ತಿಯಲ್ಲಿರುವ ಅಕ್ರಮ ಕ್ವಾರಿಗಳು ಹಾಗೂ ಅವುಗಳಿಂದ ಪರಿಸರ, ರೈತರ ಭೂಮಿ, ಬೆಳೆ ಹಾಗೂ ಗ್ರಾಮವಾಸಿಗಳ ನಿತ್ಯದ ಜೀವನಕ್ಕೆ ತೊಂದರೆಯಾಗುತ್ತಿರುವುದರ ವಿರುದ್ಧ ಪಕ್ಷ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಮಾಡಲಿದೆ. ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು –
ಡಾ.ಶ್ರೀನಿವಾಸ್ ಕರಿಯಣ್ಣ