Malenadu Mitra
ರಾಜ್ಯಶಿವಮೊಗ್ಗ

ಪೊಲೀಸ್ ತುರ್ತು ಸೇವೆಗೆ ಡಯಲ್-112

ಶಿವಮೊಗ್ಗ, :ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ಕರೆ ಮಾಡಿ ತಕ್ಷಣ ಸೇವೆಯನ್ನು ಪಡೆಯುವ ಉದ್ದೇಶದಿಂದ ಆರಂಭಿಸಲಾಗಿರುವ ಡಯಲ್-112 ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಪೂರ್ವ ವಲಯ ಐಜಿಪಿ ರವಿ ಅವರು ಸೋಮವಾರ ಚಾಲನೆ ನೀಡಿದರು.

ಶಿವಮೊಗ್ಗ ಜಿಲ್ಲೆಗೆ ಯೋಜನೆಯಡಿ ಒದಗಿಸಲಾಗಿರುವ 18 ತುರ್ತು ಸ್ಪಂದನ ವಾಹನಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಯಾವುದೇ ಪೊಲೀಸ್ ಸೇವೆ ಮತ್ತು ಅಗ್ನಿ ಅನಾಹುತ ಸೇವೆಗಳಿಗೆ ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದರು.

ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು, ತೊಂದರೆಯಲ್ಲಿರುವ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಬೇಕು. ಕರೆಯನ್ನು ಸ್ವೀಕರಿಸಿದ ಕೇಂದ್ರದಲ್ಲಿ ಅಗತ್ಯ ವಿವರಗಳನ್ನು ಪಡೆದುಕೊಳ್ಳಲಾಗುವುದು. ಎಲ್ಲಾ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು, ಕರೆಯನ್ನು ಸ್ವೀಕರಿಸಿದ ಸ್ಥಳಕ್ಕೆ ಹತ್ತಿರದಲ್ಲಿರುವ ತುರ್ತು ಸೇವಾ ವಾಹನಕ್ಕೆ ಸಂದೇಶವನ್ನು ರವಾನಿಸಿ ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು. ವಾಹನ ಆಗಮಿಸುತ್ತಿರುವ ಬಗ್ಗೆ ಮಾಹಿತಿಯನ್ನು ದೂರವಾಣಿ ಮಾಡಿದವರಿಗೆ ಎಸ್‍ಎಂಎಸ್ ಮೂಲಕ ನೀಡಲಾಗುವುದು ಎಂದು ಹೇಳಿದರು.

ಪ್ರತಿ ವಾಹನದಲ್ಲಿ ಒಬ್ಬರು ಅಧಿಕಾರಿ ಮತ್ತು ಸಿಬ್ಬಂದಿ ಇದ್ದು, ಘಟನಾ ಸ್ಥಳಕ್ಕೆ ತಕ್ಷಣ ತೆರಳಿ ಕ್ರಮ ಜರುಗಿಸಲು ಇದರಿಂದ ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಅಂಬುಲೆನ್ಸ್ ಸೇವೆಯನ್ನು ಸಹ ಇದರಡಿ ತರಲಾಗುವುದು. ಇದುವರೆಗೆ ಪೊಲೀಸ್ ಠಾಣೆ ಇಲ್ಲದ ಕಡೆಗಳಲ್ಲಿ ಪೊಲೀಸ್ ಹೊರಠಾಣೆಯನ್ನು ಸ್ಥಾಪಿಸಲಾಗುತ್ತಿತ್ತು. ಡಯಲ್-112 ಮೊಬೈಲ್ ಹೊರಠಾಣೆಯಾಗಿ ಕಾರ್ಯನಿರ್ವಹಿಸಲಿದೆ. ಯಾವುದೇ ರೀತಿಯ ಅಪರಾಧ ಕೃತ್ಯಗಳು ಅಥವಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳು ನಡೆದ ತಕ್ಷಣ ಸಾರ್ವಜನಿಕರು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಒಟ್ಟು 18 ತುರ್ತು ಸ್ಪಂದನ ವಾಹನಗಳನ್ನು ನೀಡಲಾಗಿದೆ. ಶಿವಮೊಗ್ಗ ಉಪವಿಭಾಗದಲ್ಲಿ 6, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ಉಪವಿಭಾಗಗಳಲ್ಲಿ ತಲಾ 3 ವಾಹನಗಳನ್ನು ಒದಗಿಸಲಾಗಿದೆ. 112 ಆಪ್ ಸಹ ಅಭಿವೃದ್ಧಿಪಡಿಸಲಾಗಿದ್ದು, ಟ್ವಿಟರ್ ಹ್ಯಾಂಡಲ್ ಸಿದ್ಧಪಡಿಸಲಾಗುವುದು. ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಡಯಲ್ 112 ಯೋಜನೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಹೇಳಿದರು.

Ad Widget

Related posts

ಉತ್ತಮ ಕೆಲಸಕ್ಕೆ ಮಾಧ್ಯಮಗಳಿಂದ ಸಹಕಾರ: ಲಕ್ಷ್ಮೀಪ್ರಸಾದ್
ಪ್ರೆಸ್ ಟ್ರಸ್ಟ್,ಪತ್ರಕರ್ತರ ಸಂಘದ ಚಹಾಕೂಟದಲ್ಲಿ ನಿರ್ಗಮಿತ ಎಸ್ಪಿ ಅಭಿಮತ

Malenadu Mirror Desk

ಸಾಮಾಜಿಕ,ರಾಜಕೀಯ ಹೋರಾಟ ಮಾಡಿ ಆದರೆ ಯಾರ ಗುಲಾಮರಾಗಬೇಡಿ, ಈಡಿಗ ಸಮಾಜದ ಯುವಕರಿಗೆ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು

Malenadu Mirror Desk

17 ಮನೆ ಕುಸಿತ,9 ಕಾಳಜಿ ಕೇಂದ್ರ, ಅಧಿಕಾರಿಗಳೊಂದಿಗೆ ಶೀಘ್ರ ಸಭೆ ಸ್ಥಳ ಪರಿಶೀಲಿಸಿದ ನಂತರ ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.